Monday, July 27, 2020

ನೆಲ ಬರಡಾಗುವ ಮುನ್ನ ಜೀವಜಲದ ಪ್ರಜ್ಞೆ ನಮಗಿರಲಿ

ಕೃಪೆ: Ms. ಸುನೀತಾ ನಾರಾಯಣ್
(ಮೂಲ ಕೃತಿಯ ಲೇಖಕಿ ಮತ್ತು ಭಾರತೀಯ ಪರಿಸರವಾದಿ)
ಇಸವಿ : 2015

ಅನುವಾದ: ಪ್ರಸಾದ್


‘ಭಾರತದ ಜಲಾರ್ಥಿಕ ವ್ಯವಸ್ಥೆ’ ಸಾಂಪ್ರಾದಾಯಿಕ ಆಗಿರುವ ಬದಲಿಗೆ ಆಧುನಿಕವಾಗಿ ಪರಿವರ್ತನೆಗೊಳ್ಳಬೇಕು ಎನ್ನುವುದು ನೀರಿನ ನಿರ್ವಹಣೆಯನ್ನು ಅರಿತವರ ಅಭಿಪ್ರಾಯ. ಅರ್ಥಾತ್, ಜಲವಿಭಾಗವು ಔಪಚಾರಿಕ ಆರ್ಥಿಕತೆಯ ಒಂದು ಅಂಗವಾಗಿರಬೇಕು. ಯಾವುದೇ ಬಲವಾದ ಭಾವನೆಯ ಸವಾಲಿನಂತೆ, ಇದು ಸಹಜವಾಗಿ ನೈಜವೆಂದೇ ಸ್ವೀಕರಿಸಲ್ಪಡುತ್ತದೆ.

ಆಧುನಿಕ ಮತ್ತು ಔಪಚಾರಿಕ ಜಲಾರ್ಥವ್ಯವಸ್ಥೆಯು ಅನ್ಯದೇಶಗಳಲ್ಲಿ ಹೇಗಿದೆಯೆನ್ನುವುದರೊಂದಿಗೆ, ಅದು ನಮ್ಮ ದೇಶದಲ್ಲಿ ಹೇಗೆ ಅನ್ವಯಿಸಬಹುದೆಂಬುದು ಕೂಡಾ ನಾವು ಅರಿತು ಅರ್ಥೈಸಿಕೊಳ್ಳಬೇಕಾದ ಅಂಶಗಳು. ಕೈಗಾರಿಕೋದ್ಯಮ ಹೆಚ್ಚಿರುವ ಜಗತ್ತಿನ ಅನ್ಯ ಪ್ರದೇಶಗಳಲ್ಲಿ, ಶೇಕಡಾ 70ರಷ್ಟು ಜಲಸಂಪನ್ಮೂಲವನ್ನು ಉದ್ದಿಮೆ ಹಾಗೂ ನಗರವಸತಿ ಪ್ರದೇಶಗಳು ಬಳಸಿದರೆ, ಉಳಿದ ಶೇಕಡಾ 30ರಷ್ಟನ್ನು ಕೃಷಿ ಪ್ರದೇಶಗಳು ಪಡೆಯುತ್ತದೆ. ಭಾರತದಂತಹ ಸಾಂಪ್ರದಾಯಿಕ ಜಲ ಆರ್ಥಿಕತೆಗಳಲ್ಲಿ ಸಹಜವಾಗಿ ಸಂಶಯಿಸಬಹುದಾದಂತೆ, ಕೃಷಿ ಪ್ರದೇಶ ಶೇಕಡಾ 70ರಷ್ಟು ಬಳಕೆಯಾಗುವುದು ಹಾಗೂ ಉಳಿದ ಅಷ್ಟೂ ಉದ್ದಿಮೆ ಮತ್ತು ನಗರ ಪ್ರದೇಶಗಳಲ್ಲಿ ಬಳಕೆಯಾಗುತ್ತದೆ. ನಾವು ಎಲ್ಲಿದ್ದೇವೆ ಎನ್ನುವುದಕ್ಕಿಂತಲೂ ನಾವು ಎಲ್ಲಿಗೆ ಮುನ್ನಡೆಯುತ್ತಿದ್ದೇವೆ ಎನ್ನುವುದು ಗಮನಾರ್ಹ ವಿಚಾರವಾಗಿದೆ.

ನಮ್ಮ ದೇಶದ ನಗರ ಮತ್ತು ಕೈಗಾರಿಕಾ ಕೇಂದ್ರಗಳು ಜಲಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದೆ. ಹೆಚ್ಚಿನ ನೀರು ಪೂರೈಕೆಯ ಅಗತ್ಯವಿರುವ ದೇಶದ ನಗರಗಳು ಪ್ರಬಲವಾಗಿರುವುದೂ ಹೌದು. ನಗರಗಳ ಚುನಾಯಿತ ಮಾಲೀಕರು ಹೆಚ್ಚುವರಿ ಸಮಯದ ಕಾರ್ಯಾಚರಣೆ ಮಾಡಿ ದೂರ ದೂರದ ಪ್ರದೇಶಗಳಿಂದ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸರಬರಾಜು ಮಾಡಿಕೊಳ್ಳುತ್ತಾರೆ. 300 Km ದೂರದ ಹಿಮಾಲಯಲ್ಲಿರುವ ಟೆಹರಿ ಅಣೆಕಟ್ಟಿನಿಂದ ದೆಹಲಿಯು ನೀರು ಪಡೆಯುತ್ತಿದೆ. 105 Km ದೂರದ ಕೃಷ್ಣಾ ನದಿಯಲ್ಲಿರುವ ನಾಗಾರ್ಜುನಸಾಗರ ಅಣೆಕಟ್ಟಿನಿಂದ ಹೈದರಾಬಾದ್ ನೀರು ಪಡೆಯುತ್ತಿದೆ. ಹಾಗೂ, 100 Km ದೂರದ ಕಾವೇರಿ ನದಿಯಲ್ಲಿರುವ ಕೃಷ್ಣರಾಜಸಾಗರ ಅಣೆಕಟ್ಟಿನಿಂದ ಬೆಂಗಳೂರು ನೀರು ಪಡೆಯುತ್ತದೆ. ಉದಯಪುರಕ್ಕೆ ನೀರು ಒದಗಿಸುತ್ತಿರುವ ಜೈಸಮಾಂದ್ ಸರೋವರ ಬತ್ತುತ್ತಿದೆ. ಉದಯಪುರ ನೀರು ಪೂರೈಕೆ ಸಮಸ್ಯೆಗೆ ಪರಿಹಾರಮಾರ್ಗ ಕಂಡುಕೊಳ್ಳುವ ಗಂಭೀರ ಪ್ರಯತ್ನದಲ್ಲಿದ್ದು, ಜೊತೆಯಲ್ಲೇ ಕೈಗಾರಿಕಾ ಬೆಳವಣಿಗೆಯಿಂದಾಗಿ ನೀರಿನ ಸಮಸ್ಯೆಯು ಉಲ್ಬಣಿಸುತ್ತಿದೆ. ಹಾಗಾಗಿ, ಆಧುನಿಕ ಜಲಾರ್ಥವ್ಯವಸ್ಥೆ ನಮ್ಮ ಮನೆಬಾಗಿಲಿಗೇ ಬಂದು ನಿಂತಿದೆ.
ಆಧುನಿಕ ಜಲಾರ್ಥವ್ಯವಸ್ಥೆಯೊಳಗೆ ಈ ಬದಲಾವಣೆಯ ಸಂಭ್ರಮ ಸನಿಹದಲ್ಲಿದ್ದರೂ, ನಿಧಾನವಾಗಿ ವ್ಯವಧಾನದಿಂದ ಪರ್ಯಾಲೋಚಿಸಬೇಕಾದ ಅಗತ್ಯವಿದೆ. ಗ್ರಾಮೀಣ ಭಾರತದಲ್ಲಿ 'ಅನೌಪಚಾರಿಕ' ಜಲಾರ್ಥಿಕ ವ್ಯವಸ್ಥೆ, ಟಿಲ್ಲರ್ ಇತ್ಯಾದಿ ಕೃಷಿ ಯಂತ್ರೋಪಕರಣಗಳ ಬಳಕೆ ಈಗಲೂ ಚಾಲ್ತಿಯಲ್ಲಿದೆ. ಆರ್ಥಿಕತೆಯು ಕೃಷಿ-ಅವಲಂಬನೆಯಿಂದ ‘ಉತ್ಪಾದನಾ-ಸೇವಾ ವಲಯ ಚಾಲಿತ’ವಾಗಿನ್ನೂ ಬದಲಾಗಿಲ್ಲ. ಹಳೆಯ ಅನೌಪಚಾರಿಕ ಜಲಾರ್ಥಿಕತೆಗೆ ನೀರು ಅಗತ್ಯ. ಹೊಸ ಔಪಚಾರಿಕ ಜಲಾರ್ಥಿಕತೆಯಲ್ಲಿ ನೀರಿನ ಬೇಡಿಕೆ ಇನ್ನಷ್ಟು ಹೆಚ್ಚು. ಬದಲಾವಣೆಯ ಹಾದಿಯಲ್ಲಿ, ನೀರಿನ ಮೇಲಿನ ತಮ್ಮ ಆದ್ಯ ಹಕ್ಕುಗಳನ್ನು ಉಳಿಸಿಕೊಳ್ಳಲು ದಂಗೆಯೇಳುವ ರೈತರನ್ನು ಸಮಾಧಾಪಡಿಸುವ ಸವಾಲು ಕೂಡಾ ಎದುರಾಗುವ ಸಾಧ್ಯತೆಗಳಿವೆ.

ಭಾರತದ ಜಲಕ್ಷೇತ್ರ ರೂಪಾಂತರಗೊಂಡು ಸುಧಾರಣೆಯಾಗಿ ಎಲ್ಲರಿಗೂ ಸಾಕಷ್ಟು ಸ್ವಚ್ಛ ನೀರು ಲಭ್ಯವಾಗಬೇಕು. ಆದರೆ ಈ ಪರಿವರ್ತನೆಗೆ ಯಾವುದೇ ಸ್ಥಾಪಿತ ಮಾದರಿಯಿಲ್ಲ. ಭವಿಷ್ಯದಲ್ಲಿ ಸ್ವಯಂನಿರ್ಮಿತ ನೀರಿನ ಮಿಶ್ರ(ಸಂಯೋಜಿತ)-ಆವೃತ್ತಿಯನ್ನು ಸೃಷ್ಟಿಸಲು ನಾವು ಆಧುನಿಕ ಆರ್ಥಿಕ ಮಾದರಿಯನ್ನೂ ಮೀರಿ ಮುನ್ನಡೆಯಬೇಕು.

ನಮಗೆ ಅನುಕರಿಸಲು ಕೂಡಾ ಯಾವುದೇ ಮಾದರಿಯಿಲ್ಲ. ಆದ್ದರಿಂದ ನಮ್ಮ ಅಗತ್ಯವನ್ನು ಅವಲಂಬಿಸಿ ಜಲಕ್ಷೇತ್ರ ಸುಧಾರಣೆಯ ಸ್ವಂತ ಮಾರ್ಗವನ್ನು ಆಯ್ಕೆಮಾಡಿ ಮರುಸಂಶೋಧನೆ ನಡೆಸಲು ನಾವು ಸ್ವತಂತ್ರರು. ಬಳಿಕ, ಹಳೆಯ ಸುಧಾರಣಾ ಮಾರ್ಗಕ್ಕೆ ಹೊಸದನ್ನು ಹೊಂದಿಸಿ ಜೀವಜಲ ನಿರ್ವಹಣೆಯ ಹೊಸ ಮಾರ್ಗ ಸೃಷ್ಟಿಸಿ ಬೆಳೆಸಬಹುದು. ಅರ್ಥಾತ್, ನೀರಿನ-ಸುಧಾರಣಾ ಕಾರ್ಯದಲ್ಲಿ ನಾವು ತೀರಾ ಕಟ್ಟುನಿಟ್ಟಾಗಿರಲೂ ಸಾಧ್ಯವಿಲ್ಲ. ನೀರಾವರಿ ಇದಕ್ಕೊಂದು ಸರಳ ಉದಾಹರಣೆ.

ಭಾರತದ ನೀರಾವರಿ ವ್ಯವಸ್ಥೆಯಲ್ಲಿ 20,000ಕ್ಕಿಂತ ಹೆಚ್ಚು ವೈಯಕ್ತಿಕ ಬಾವಿಗಳು ಮತ್ತು ಕೊಳವೆಬಾವಿಗಳು ಪ್ರಾಬಲ್ಯ ಸಾಧಿಸಿವೆ. ಭೂ-ಮೇಲ್ಮೈ ನೀರಿನ ವ್ಯವಸ್ಥೆಯ ರಚನೆಗೆ ನಾವು ಹಣದ ಹೂಡಿಕೆಗಳನ್ನು ಹೆಚ್ಚಿಸಿದ್ದೇವೆ. ಆದರೂ ಅಂತರ್ಜಲವೇ ಕೃಷಿ ನೀರಾವರಿಗೆ ಪ್ರಮುಖ ಮೂಲವಾಗಿದೆ. ಭೂ-ಮೇಲ್ಮೈ ನೀರಿನ ಔಪಚಾರಿಕ ವ್ಯವಸ್ಥೆಯಲ್ಲಿನ ಅಕ್ಷಮತೆ ಹಾಗೂ ವಿತರಣೆಯಲ್ಲಾಗುವ ನಷ್ಟವು ವೆಚ್ಚವನ್ನು ಹೆಚ್ಚಿಸುತ್ತದೆ. ಅಂತರ್ಜಲದ ಅನೌಪಚಾರಿಕ ಜಗತ್ತಿನಲ್ಲಿ ಬೆಳೆಗಳನ್ನು ಬೆಳೆಸುವಾಗ ನೀರಿನ ಹೂಡಿಕೆಯ ಮೌಲ್ಯವನ್ನು ಹೆಚ್ಚಿಸಲು ಕೃಷಿಕರು ಕಲಿತಿರುತ್ತಾರೆ. ಆದರೆ ಔಪಚಾರಿಕ ಜಗತ್ತಿನ ಅಂತರ್ಜಲ ಬಳಕೆದಾರರಲ್ಲಿ ಯಾವುದೇ ಅನೌಪಚಾರಿಕ ಜಲನಿರ್ವಹಣೆಗೆ ಅವಕಾಶವಿಲ್ಲ. ಯಾರೊಬ್ಬರೂ ನೀರಿನ ಬಳಕೆದಾರರ ಈ ಸೈನ್ಯವನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಹಾಗಾಗಿ ಅವರಿಗೆ ಯಾವುದೇ ವಿಮಾ ಯೋಜನೆಗಳಿರುವುದಿಲ್ಲ. ಯಾವೊಂದು ವಿಮೆಯೂ ಕೂಡಾ ಅವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಹಳೆಯ ಮೌಲ್ಯಗಳನ್ನು ಉಳಿಸಿಕೊಂಡು ಹೊಸ ಆವಿಷ್ಕಾರಗಳನ್ನು ನಡೆಸುವುದು ಇಲ್ಲಿ ಮುಖ್ಯವಾಗಿದೆ. ಬಾವಿಯಲ್ಲಿ ವಾರ್ಷಿಕ ನೀರಿನ ಹೆಚ್ಚಳವನ್ನು ಉಳಿಸಿಕೊಳ್ಳುವುದಕ್ಕಾಗಿ ಕೃಷಿಕರು ಬಾವಿಯ ನೀರು ತುಂಬಿಸಬೇಕಾದ ಅಗತ್ಯವೇ ಇಲ್ಲ. ಹಾಗಿರುವಾಗ, ತಮ್ಮ ಜಲಸಂಪನ್ಮೂಲವನ್ನು ಉತ್ತಮವಾಗಿ ನಿರ್ವಹಿಸಲು ಈ ನೀರಿನ ಬಳಕೆದಾರರ ಸೈನ್ಯವನ್ನು ಸಜ್ಜುಗೊಳಿಸುವುದೇ ದೊಡ್ಡ ಸವಾಲು. ನೀರಿನ ಕೊಯ್ಲು ಮಾಡುವ ಸಾಂಪ್ರದಾಯಿಕ ವ್ಯವಸ್ಥೆಗಳಿಂದ ನಾವು ಇಲ್ಲಿ ಕಲಿಯಬಹುದು. ನೀರಿನ ಕೊಯ್ಲಿಗಾಗಿ ರಾಜ್ಯದ ಉದ್ದಗಲಕ್ಕೂ ಲಕ್ಷಾಂತರ ವಿಂಗಡನೆ ಮತ್ತು ವಿವಿಧ ರಚನೆಗಳಿವೆ. ಆದರೆ, ಅವೆಲ್ಲವೂ ಅಂತರ್ಜಲವನ್ನು ಪುನರ್ಭರ್ತಿ ಮಾಡಲು ನಿರ್ಮಿಸಿದವಾಗಿವೆ. ಅವು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಭೂಮಿಯ ಸ್ಪಂಜುಗಳಂತೆ, ಮತ್ತು ನೆಲದ ಉಪಮೇಲ್ಮೈಯ ನೀರಿನ ಹರಿವನ್ನು ಹೆಚ್ಚಿಸುತ್ತದೆ.
ಈಗ ನಮ್ಮ ಮುಂದಿರುವ ಪ್ರಶ್ನೆಗಳೇನೆಂದರೆ:
1. ದೊಡ್ಡ ಮತ್ತು ಸಣ್ಣನೀರಾವರಿಯನ್ನು ಒಂದುಗೂಡಿಸಿ, ಮಳೆಯ ಅನುದಾನವನ್ನು ಹೆಚ್ಚಿಸಿ ಮತ್ತು ನೀರಿನ ವಿತರಣೆಯಲ್ಲಿ ಉಂಟಾಗುವ ನಷ್ಟವನ್ನು ಇಳಿಸಿ, ಇದೊಂದು ಸಂಯೋಜಿತ ನೀರಾವರಿಗೆ ಮೂಲ ಮಾರ್ಗವಾಗಬಹುದೇ?
2. ನೀರಿನ ಸಂವರ್ಧನೆಯ ಹಳೆಯ ವ್ಯವಸ್ಥೆಯನ್ನು, ಚಮತ್ಕಾರಗಳ ಮರುಸಂಶೋಧನೆಗೂ ಮತ್ತು ಹೊಸ ಮಾರ್ಗಗಳಾದ "ಸಮರ್ಥ ನೀರಿನ ಬೆಳೆಗಳು, ಬೆಳೆಗಳ ವೈವಿಧ್ಯತೆ, ಮಿತಿ ಮೀರಿದ ನೀರಿನ ಬಳಕೆಯನ್ನು ತಡೆಯಲು ವಿದ್ಯುತ್ ಖರ್ಚುವೆಚ್ಚಗಳ ನಿರ್ವಹಣೆ”ಗಳೊಂದಿಗೆ ಸಂಯೋಜಿಸಲು ನಾವು ಧೈರ್ಯ ಮಾಡಬಹುದೇ?

ಬೆಲೆ ನಿರ್ವಹಣೆಯ ಮೂಲಕ ನೀರನ್ನು ನಿರ್ವಹಿಸುವ ಆಧುನಿಕ ತತ್ವವನ್ನು ತೆಗೆದುಕೊಳ್ಳೋಣ.
ನಾವು ನೀರಿನ ಬಳಕೆಗೆ ಸಮರ್ಪಕವಾಗಿ ಬೆಲೆ ಕಟ್ಟಬೇಕು. ಭಾರತದ ಶ್ರೀಮಂತ ನಗರಗಳು ಮತ್ತು ಶ್ರೀಮಂತ ಕೈಗಾರಿಕೆಗಳು ಅವರು ಬಳಸುವ ಅಷ್ಟೂ ನೀರಿಗಾಗಿ ಹಣ ಪಾವತಿಸುವ ಅಗತ್ಯವಿದೆ. ಆದರೆ, ಶ್ರೀಮಂತ-ನೀರಿನ-ಬಳಕೆದಾರರು ಕೂಡಾ ನೀರನ್ನು ದೊಡ್ಡ ಪ್ರಮಾಣದಲ್ಲಿ ಪೋಲು ಮಾಡುತ್ತಿದ್ದಾರೆ. ಈ ಪ್ರಕ್ರಿಯೆ ಹಣಕಾಸಿನ ವಿಚಾರದಿಂದ ಲಾಭದಾಯಕವಲ್ಲ.

ಹಾಗೂ, ಇಂದು ಪ್ರತಿ ನಗರವೂ ಸ್ವಚ್ಛವಾದ ಮೇಲಿನ ಸ್ತರದ ಜಲಮೂಲಗಳಿಂದ ನೀರನ್ನು ಪಡೆದುಕೊಂಡು, ಅದರ ತ್ಯಾಜ್ಯನೀರನ್ನು ಕೆಳಗಿನ ಸ್ತರದಲ್ಲಿ ಹೊರಬಿಡುತ್ತವೆ. ಕೆಳಗಿನ ಸ್ತರದ ಜಲಮೂಲಗಳನ್ನು ಅವಲಂಬಿಸಿಕೊಂಡು ವಾಸಿಸುವ ಜನರಿಗೆ ಈ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ.

ಹಾಗಾಗಿ ಆವಿಷ್ಕಾರಗಳನ್ನು ಮಾಡುವ ಅಗತ್ಯವಿದೆ. ಆಧುನಿಕ ಜಗತ್ತಿನ ನೀರಿನ-ಪ್ರಜ್ಞೆಯನ್ನು ಅರ್ಥೈಸಿಕೊಳ್ಳೋಣ. ‘ಕೋಪನ್ ಹೇಗನ್’ನಂತಹ ನಗರವು ದಿನವೊಂದಕ್ಕೆ 200ಲೀಟರ್’ಗಳಿಂದ 110 ಲೀಟರ್’ಗಳ ತನಕ ತನ್ನ ನೀರಿನ ಬಳಕೆಯನ್ನು ಕಡಿಮೆಗೊಳಿಸಿದೆ. ಭಾರತೀಯ ನಗರಗಳು ವಿಜ್ಞಾನ ಮತ್ತು ಕಲೆಗಳ ದಕ್ಷತೆಯನ್ನು ಕಲಿಸುವುದರಲ್ಲಿ ವ್ಯರ್ಥ ಕಾಲಹರಣ ಮಾಡುತ್ತಿದೆಯೇ ವಿನಹ ಅದರಲ್ಲಿನ್ಯಾವ ಸ್ವಾರಸ್ಯವಿದೆ? ಪುನರಾವೃತ್ತಿಗೊಳಿಸುವ ಕಲೆ ಹಾಗೂ ತ್ಯಾಜ್ಯನೀರನ್ನು ಮರುಬಳಕೆ ಮಾಡುವುದು ಅಗತ್ಯವೆಂದು ಜಗತ್ತು ಇವಾಗಷ್ಟೇ ಅರ್ಥಮಾಡಿಕೊಂಡಿದೆ.
3. ನಾವು ಹೆಚ್ಚು ಹೆಚ್ಚು ತ್ಯಾಜ್ಯವನ್ನು ಜಲರೂಪದಲ್ಲಿ ಉತ್ಪಾದಿಸಲು ಪ್ರಾರಂಭಿಸುತ್ತಿರುವಾಗ, ಹೊರಹಾಕಲ್ಪಡುವ ಪ್ರತಿಯೊಂದು ತೊಟ್ಟು ನೀರಿನ ಮರುಬಳಕೆ ಮಾಡುವ ಅತ್ಯಾಧುನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ನಡೆಸುವ ಆವಿಷ್ಕಾರ ನಾವೇಕೆ ಮಾಡಬಾರದು?

ಆಧುನಿಕರಾಗಿ ಇರುವುದೆಂದರೆ 'ಹಿಡಿದಿಟ್ಟಕೊಂಡು ಉಳಿಸಿಕೊಳ್ಳೋದು' ಎಂದಲ್ಲ. ಆಧುನಿಕವಾಗಿರುವುದೆಂದರೆ ಅಪೂರ್ವವಾಗಿರುವುದಾಗಿದೆ. ಅದೊಂದು ನಿಧಾನವಾಗಿ ಹೊರಬರುವ ಮನಸ್ಸು. ನಮ್ಮ ಕಲ್ಪನಾ ಸಾಮರ್ಥ್ಯದ ಕೊರತೆಯೇ ನಮ್ಮನ್ನು ಈ ನಿಟ್ಟಿನಲ್ಲಿ ತಡೆಹಿಡಿಯುತ್ತದೆಂದು ನಂಬಬೇಕಷ್ಟೇ.
4. ಕಲ್ಪನಾ ಸಾಮರ್ಥ್ಯದಲ್ಲಿ ಈ ಕೊರತೆಯನ್ನು ನಿವಾರಿಸಿ ಎಲ್ಲರೂ ನೀರಿನ ಕನಸು ಕಾಣುವ ಸ್ವಾತಂತ್ರ್ಯಕ್ಕಾಗಿ ನಾವು ಆಧುನಿಕರಾಗಿ  ಬದಲಾಗಬಾರದೇಕೆ?

-----------------------------------------------------------------

Original version written in English
Courtesy: Ms. Sunitha Narain (Author of this article and Indian Environmentalist)
Year : 2015

LeapFrog Beyond ‘Modern’ Water Paradigm

People who understand water management will tell you that India is a traditional water economy and that it has to make the transition to a modern water economy. In other words, the water sector has to become part of the formalised economy. As with any feel-right challenge, this is normally accepted to be true. 

The point to understand is what this modern and formal water economy means in the rest of the world and what it will mean for us. In the industrialised world, industry and urban households use over 70 per cent of the water resources, while agriculture gets the remaining 30 per cent. In traditional water economies like India, the reverse is true: agriculture consumes over 70 per cent and industry and urban areas the rest. The point is not where we are. The point is: where are we heading? 

The fact is that urban areas and industrial hubs in our part of the world are now putting greater pressure on water resources. Cities across the country need more water. They are powerful. Their elected masters work overtime to source water from far, and further, away. Delhi will get water from the Tehri dam, over 300 km away in the Himalaya; Hyderabad, from Nagarjunasagar dam on the Krishna river 105 km away; Bangalore, from the Cauvery, about 100 km away. Udaipur used to draw its water from the Jaisamand lake but its drying up, and so the city is desperately seeking a way out of this new thirst. Add to all this industrial growth. Yes, the modern water economy is indeed at our doorstep. 

But wait before rejoicing at the change. The fact also is that the 'informal' water economy of rural India, tillers and all, still exists. The economy has not transformed from being agriculture-dependent to a manufacture-service sector driven one. The old needs water. The new demands more and more. Surely the change will come -- carried on the shoulders of strife, even bloodshed: thousands of small and big mutinies, from Rajkot in Gujarat and Sri Ganganagar in Rajasthan, in which farmers have died defending their first right over water. 

There is no denying India's water sector needs to be reformed, indeed transformed, so that it can provide clean and adequate water to all. But there is no established model for our transformation. We will have to leapfrog over the modern economic paradigm, to create our own -- hybrid -- version of the water future. 

If we accept there is no model for us to emulate, then we are free to choose and reinvent our way of working water, based on need. We can then mix the new with the old to brew our own special bottle of the water of life. But most importantly, this also means that we cannot afford to be dogmatic about water-works. 

Take irrigation. We know that over 20 million individual wells and tubewells rule India's world of irrigation. Groundwater is the main source of irrigation to agriculture, even as we have maximised our investments in creating surface water systems. Here, distribution losses and inefficiencies push up the cost, as compared to the informal world of the groundwater agriculturists who have learnt to maximise the value of their water investment in making crops grow. But in the formal water vision, there is no place for the informal world of groundwater users. No policy can even account for them. No policy plans for them, for nobody understands how to manage this army of water users. 

The point is to innovate, by borrowing from the past. The challenge is to enlist this army into managing their resource better; they merely need to recharge the well to live off its annual water interest. We can learn here from traditional systems of harvesting water. Millions of disaggregated and diverse structures across the county. But all of them built to also recharge the groundwater -- holding the rain, like Earth's sponges, and enhancing subsurface flows. Is it possible to root for conjunctive irrigation -- combine the big and the small, maximise our rainfall endowment and minimise distribution losses? Dare we re-discover the magic of the old systems of water augmentation and combine these with all the new answers -- water efficient crops, diversification of crops, pricing electricity to ward off over-extraction of water? 

Now take the modern dogma of managing water through pricing. We should price water: rich cities and the industries of rich India need to pay for the water they use. But the rich water-users are also becoming great wasters of water, and aren't leery of financing it. And as every city today extracts water from cleaner upstream sources and discharges its wastewater downstream, people living here find the water they get is not fit for drinking. 

So let's innovate, learn the water-prudence of the modern world. A city like Copenhagen, from using 200 litres per capita per day of water, today uses less than 110 litres per capita per day. Why should Indian cities first become wasteful, and then learn the science and art of efficiency? Similarly, the world has only now begun to understand that it will need to practice the art of recycling and reusing wastewater. Why should we not, as we begin to generate more and more waste, invent the most modern waste management system that reuses every drop of water discharged?

To be modern is not to 'catch up and keep up'. Being modern is being novel; it is a mindset that skips nimbly beyond. I believe all that stops us is our own lack of imagination. Can't we be modern, turn this lack into the freedom to dream of water for all?

https://www.downtoearth.org.in/blog/moving-nimbly-beyond-9407

Tuesday, December 11, 2018

ಎಷ್ಟೇ ಕಷ್ಟವಾದರೂ ಸರಿ, ಮೊದಲು ಆರೋಗ್ಯದಲ್ಲಿರಿ..

ನೀವು ಯಾವತ್ತಾದರೂ ದೈಹಿಕ ಶ್ರಮಗಳನ್ನು ಮಾಡುವುದಕ್ಕೆ ಸೋಮಾರಿತನ ತೋರಿಸಿದ್ದಿರಾ? ಮತ್ತು ಅದರಿಂದಾಗುವ ದುಷ್ಪರಿಣಾಮಗಳನ್ನು ಎದುರಿಸಿದ್ದೀರಾ..? ನಿಮ್ಮ ಸ್ವಂತ ಆರೋಗ್ಯದ ಕಡೆಗಿನ ನಿಮ್ಮ ನಿರ್ಲಕ್ಷ್ಯಕ್ಕೆ ನೀವೇ ಎಂದಾದರೂ ಬಲಿಪಶುವಾಗಿದ್ದೀರಾ?

ಸ್ನೇಹಿತರೇ,
ದೈನಂದಿನ ಬದುಕಿನಲ್ಲಿ ದೈಹಿಕ ಚಟುವಟಿಕೆಗಳ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದರ ಪ್ರಾಮುಖ್ಯತೆಯನ್ನು ನಾನು ನನ್ನ ಜೀವನದಲ್ಲಿ ಅರಿತ 2 ಘಟನೆಗಳ ಕುರಿತು ಇಲ್ಲಿ ಬರೆಯಬಯಸಿದ್ದೇನೆ.

ಡಿಸೆಂಬರ್ 2012, ನಮ್ಮ ಮನೆಯಲ್ಲಿ ಜರಗಿದ ಕಾರ್ಯಕ್ರಮವೊಂದರಲ್ಲಿ ಅತಿಥಿಗಳಿಗೆ ಆಹಾರ ಉಣಬಡಿಸುತ್ತಿದ್ದೆ. 3ನೇ ಸುತ್ತಿನಲ್ಲಿ ಆಹಾರ ಬಡಿಸುತ್ತಿರುವಾಗ, ನನ್ನ ಕೆಳಬೆನ್ನಿನಲ್ಲಿ ಹಠಾತ್ತನೆ ನೋವುಂಟಾಗಿತ್ತು ಮತ್ತು ಶೀಘ್ರವೇ ನಾನು ಕುಸಿದು ಕುಳಿತೆ, ಆಮೇಲೆ ಮಲಗಿಯೇ ಬಿಟ್ಟೆ!

ಚಿಕಿತ್ಸೆಗಾಗಿ ನಾನು ಆಯುರ್ವೇದ ಪಂಡಿತರೊಬ್ಬರಲ್ಲಿಗೆ ಹೋಗಿದ್ದೆ ಹಾಗೂ ಆ ನಂತರ 1 ತಿಂಗಳ ಕಾಲ ನಾನು ಔಷಧಗಳನ್ನು ತೆಗೆದುಕೊಳ್ಳುತ್ತಾ ವಿಶ್ರಾಂತಿಯಲ್ಲಿದ್ದೆ. ನೋವು ಸ್ವಲ್ಪಮಟ್ಟಿಗೆ ವಾಸಿಯಾಗಿತ್ತು. ಆದರೆ ಒಂದು ತಿಂಗಳ ನಂತರ ಮತ್ತೆ ಆ ನೋವು ನನ್ನನ್ನು ಆಕ್ರಮಿಸಿತು, ಈ ಬಾರಿ ಮಾತ್ರ ನೋವು ಸಹಿಸಲಸಾಧ್ಯವಾಗಿತ್ತು! ದುಃಸ್ಧಿತಿಯಲ್ಲಿದ್ದ ನನ್ನನ್ನು ಕಂಡ ನನ್ನ ಅಕ್ಕ ನನಗೆ Orthopedic ವೈದ್ಯರನ್ನು ಭೇಟಿ ಮಾಡಲು ಸೂಚಿಸಿದರು.

ವೈದ್ಯರು ನನ್ನನ್ನು ಕೇಳಿದರು, "ನೀನು ಈ ಹಿಂದೆ Gymಗೆ ಹೋಗ್ತಿದ್ಯಾ?"
ನಾನು ಉತ್ತರಿಸಿದೆ, "ಹೌದು, ನಾನು 6 ವರ್ಷಗಳ ಹಿಂದೆ Gymಗೆ ಹೋಗುವುದನ್ನು ನಿಲ್ಲಿಸಿದ್ದೆ.". ವೈದ್ಯರು ಉತ್ತರಿಸುತ್ತಾ, "ಅದೇ ನಿಮ್ಮ ಬೆನ್ನು ಬಿದ್ದುಹೋಗಲು ಪ್ರಮುಖ ಕಾರಣವಾಗಿದೆ. ನಿಮಗೆ ಕೆಳ-ಬೆನ್ನು ಸ್ನಾಯು ಸೆಳೆತ ಉಂಟಾಗಿದೆ. ನೀವು Gymಗೂ ಹೋಗುತ್ತಿಲ್ಲ ಮತ್ತು ನಿಮ್ಮ ದೇಹಕ್ಕೆ ನೀವು ಯಾವುದೇ ವ್ಯಾಯಾಮವನ್ನೂ ನೀಡುತ್ತಿಲ್ಲ. ಆದ್ದರಿಂದ ನಿಮ್ಮ ದೇಹವು ಯಾವ ಕ್ಷಣದಲ್ಲೂ ಸ್ನಾಯು ಸೆಳೆತಕ್ಕೆ ಗುರಿಯಾಗುವಷ್ಟು ಕ್ಷೀಣಿಸಿದೆ."

ಪ್ರತಿದಿನವೂ ತಪ್ಪದೆ 3 ಸರಳವಾದ ವ್ಯಾಯಾಮ ಮಾಡಲು ಅವರು ನನಗೆ ಸಲಹೆ ನೀಡಿದರು. ಆ 3 ವ್ಯಾಯಾಮಗಳು ಬೇರಿನ್ಯಾವುವೂ ಅಲ್ಲ, ಅವು, ನಾನು ಹಿಂದೆ ದಿನನಿತ್ಯ ಮಾಡುತ್ತಿದ್ದ ಅದೇ ಹಳೆಯ ನೌಕಾಸನ, ಸರ್ವಾಂಗಾಸನ ಮತ್ತು ಸುಪ್ತ ಮತ್ಸ್ಯೇಂದ್ರಾಸನಗಳಾಗಿದ್ದವು..! 3 ಯೋಗಾಸನಗಳೆಂದು ಕರೆಯುವ ಬದಲು, ವೈದ್ಯರು ಇದನ್ನು 3 ವ್ಯಾಯಾಮಗಳೆಂದು ಕರೆಯುತ್ತಿದ್ದರು. ಪ್ರತಿದಿನ ತಪ್ಪದೆ ಯೋಗಾಸನ ಮಾಡಿ ಕೆಲವೇ ದಿನಗಳಲ್ಲಿ ನಾನು ಸಂಪೂರ್ಣವಾಗಿ ಗುಣಮುಖನಾಗಿದೆ.

ನಾನು ಈ ಪಾಠವನ್ನು ಕಠಿಣ ಮಾರ್ಗದಿಂದ ಕಲಿತೆ. ಸರಿ, ನಾನು ಜೀವನದಲ್ಲಿ ದೈಹಿಕ ಚಟುವಟಿಕೆಗಳ ಪ್ರಾಮುಖ್ಯತೆಯನ್ನು ಅರಿತುಕೊಂಡ ಮೊದಲನೆಯ ಘಟನೆ ಇದಾಯ್ತು.

ಇನ್ನು 2ನೇ ಘಟನೆ, ಡಿಸೆಂಬರ್ 2014ರಲ್ಲಿ ನಡೆಯಿತು.
ನನಗಾಗಿ ಓರ್ವ ಯುವತಿಯನ್ನು ನಾನು ಗಂಭೀರವಾಗಿ ಹುಡುಕಲು ಪ್ರಾರಂಭಿಸಿದೆ. ನನಗೆ ಬಹಳ ವಯಸ್ಸೇನೂ ಆಗಿರಲಿಲ್ಲ, ನಾನು ಕೇವಲ 30ರ ಎಳೆಯ ವಯಸ್ಸನ್ನು ದಾಟಿದ್ದೆನಷ್ಟೆ! ಬಹಳಷ್ಟು ಹುಡುಕಾಟದ ಬಳಿಕ ನಾನು Matrimonial Website ಒಂದರಲ್ಲಿ ಓರ್ವ ಯುವತಿಯನ್ನು ಕಂಡೆ. ಬಳಿಕ ಆ ಯುವತಿಯ ತಾಯಿಯೊಂದಿಗೆ ಎರಡು ಬಾರಿ ಮಾತನಾಡಿದೆ.

ನಾನು ಅವರೊಂದಿಗೆ ಎರಡನೆಯ ಬಾರಿ ಸಂಭಾಷಣೆಯಲ್ಲಿದ್ದಾಗ, ಅವರು "ಜಾತಕಗಳು ತೃಪ್ತಿಕರ ಮಟ್ಟಕ್ಕೆ ಹೊಂದಿಕೊಳ್ಳುತ್ತಿಲ್ಲ. ಆದರೂ, ಈ ಸಂಬಂಧದ ವಿಚಾರವಾಗಿ ನಾನು ಇನ್ನೊಮ್ಮೆ ಯೋಚನೆ ಮಾಡಬೇಕು. ಹಾಗಾಗಿ, ಈಗ ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬೇಕು.”.

ಆ ನಂತರ ಅವರು ತನ್ನದೇ ರೀತಿಯಲ್ಲೊಂದು ಸಂದರ್ಶನವನ್ನು ಪ್ರಾರಂಭಿಸಿದರು: “ನಿಮ್ಮ ಎತ್ತರ ಎಷ್ಟೂಂತ ಕೇಳಬಹುದಾ?"
ನಾನು "5 feet 7 inch" ಎಂದು ಉತ್ತರಿಸಿದೆ.
ಅವರು ಮುಂದಿನ ಪ್ರಶ್ನೆಯನ್ನು ಎಸೆದರು, "ನಿಮ್ಮ ತೂಕ ಎಷ್ಟು?"
ಈಗ, ನಾನು ನಿಧಾನವಾಗಿ ನಡುಗಲಾರಂಭಿಸಿದೆ..! ನಾನು "ಆ.. 58Kg" ಎಂದು ಉತ್ತರಿಸಿದೆ.
ಅವರು ಹೇಳಿದರು "ನಿಮ್ಮ ವಯಸ್ಸು 30, ಎತ್ತರ 5.7, ಆದರೆ ತೂಕದ ಕೇವಲ 58..??!! ಅದು ನಿಮ್ಮ ದೇಹಕ್ಕೆ ಸೂಕ್ತವಾದ ತೂಕವಲ್ಲ. ನೀವು ಆರೋಗ್ಯದಲ್ಲಿದ್ದೀರಿ ಮತ್ತು ಯೋಗ್ಯರಾಗಿದ್ದೀರಿ ಎಂದು ನಾನು ಹೇಗೆ ಖಚಿತಪಡಿಸಿಕೊಳ್ಳಬಹುದು? ಇಲ್ಲ, ಈ ಪ್ರಸ್ತಾಪವನ್ನು ಇನ್ನು ನಾವು ಮುಂದುವರಿಸಲು ಸಾಧ್ಯವಿಲ್ಲ. ಕ್ಷಮಿಸಿ." ಮತ್ತು ಅವರು ಕರೆಯನ್ನು ಕೊನೆಗೊಳಿಸಿದರು.

ನನ್ನ ಆರೋಗ್ಯದ ಬಗ್ಗೆ ಸ್ವತಃ ನನ್ನದೇ ಆದ ನಿರ್ಲಕ್ಷ್ಯದಿಂದಾಗಿ ನಾನು ತಿರಸ್ಕೃತನಾದ ಒಂದು ಘಟನೆ ಇದಾಗಿದೆ. ಅಲ್ಲಿಯ ತನಕ ನಾನು ದೈಹಿಕ ಚಟುವಟಿಕೆಗಳ ಪ್ರಾಮುಖ್ಯತೆ ಮತ್ತು ಅದರ ಪ್ರಯೋಜನಗಳನ್ನು ಅರ್ಥಮಾಡಿಕೊಂಡಿರಲಿಲ್ಲ.

ಸ್ನೇಹಿತರೇ, ನಾನು ಇಲ್ಲೊಂದು ಸಂದೇಶವನ್ನು ನೀಡಬಯಸುತ್ತೇನೆ.
ಅದು ಬೇರಿನ್ನೇನೂ ಅಲ್ಲ, ನಮಗೆ ಉತ್ತಮ ದೈಹಿಕ ವ್ಯಾಯಾಮವನ್ನು ನೀಡುವಂತಹ ಉತ್ತಮ ಅಭ್ಯಾಸಗಳನ್ನು ನಾವು ಎಂದಿಗೂ ನಿಲ್ಲಿಸಬಾರದು.
ಅವು:
  • ಯೋಗಾಸನಗಳನ್ನು ಮಾಡುವುದಿರಲಿ,
  • Gymಗೆ ಹೋಗುವುದಿರಲಿ,
  • Jogging ಮಾಡುವುದಿರಲಿ,
  • ಓಡುವುದಿರಲಿ,
  • ಈಜುವುದಿರಲಿ,
  • ಯಾವುದೇ ಕ್ರೀಡೆ ಅಥವಾ ಆಟಗಳನ್ನು ಆಡುವುದಿರಲಿ,
  • ಅಥವಾ ದೈಹಿಕ ಶ್ರಮವನ್ನು ನೀಡುವಂತಹ ಯಾವುದೇ ಚಟುವಟಿಕೆಗಳನ್ನು ಮಾಡುವುದಿರಲಿ..
-ಇವುಗಳಲ್ಲಿ ಚಟುವಟಿಕೆ ಯಾವುದೇ ಆಗಿರಬಹುದು, ಆದರೆ, ದಯವಿಟ್ಟು ಯಾವುದೇ ಕಾರಣಕ್ಕೂ ಈ ಶ್ರಮದಾಯಕ ಚಟುವಟಿಕೆಗಳನ್ನು ಮಾತ್ರ ನಿಲ್ಲಿಸಲೇಬೇಡಿ.
ದಯವಿಟ್ಟು ನನ್ನ ಹಾಗೆ ನಿಮ್ಮ ಸ್ವಯಂ ಸೋಮಾರಿತನಕ್ಕೆ ನೀವೇ ಬಲಿಯಾಗದಿರಿ ಮತ್ತು ಅದರ ಪರಿಣಾಮವಾಗಿ ಸ್ವತಃ ನಿಮ್ಮದೇ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ.

ನಿಮ್ಮ ಆರಾಮದರಮನೆಯಿಂದ ಸ್ವಲ್ಪ ಹೊರಬಂದು ಒಂದಿಷ್ಟು Caloryಗಳನ್ನು ಖರ್ಚು ಮಾಡಿ.
ನೆನಪಿರಲಿ:
"ಆರೋಗ್ಯವೇ ನಮ್ಮೆಲ್ಲರಿಗೂ ಆದ್ಯ ಐಶ್ವರ್ಯ.
ಉತ್ತಮ ಆರೋಗ್ಯದಲ್ಲಿ ಇರದಿದ್ದರೆ ನೀವು ನಿಮ್ಮ ಜೀವನದಲ್ಲಿ ಯಾವ ಸಾಹಸನ್ನೂ ಮಾಡುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ.
ಆದ್ದರಿಂದ ಎಷ್ಟೇ ಕಷ್ಟವಾದರೂ ಸರಿ, ಆರೋಗ್ಯ ಮಾತ್ರ ಚೆನ್ನಾಗಿಟ್ಟುಕೊಳ್ಳಿ..!"

Tuesday, October 9, 2018

ನಿಂದನೆಗಳನ್ನ ನುಂಗದಿದ್ರೆ ಸ್ನೇಹ ಅಸಾಧ್ಯವೇ?

ಈ ಹಿಂದೆ ನಾಪಾಸಾಗಿ, ಈಗ ನಮ್ಮ ತರಗತಿಗೆ ಬಂದಿರುವ ಅವನು ಮತ್ತು ಅವನಂತೇ ನಾಪಾಸಾಗಿದ್ದ ದೋಸ್ತಿಗಳನ್ನೆಲ್ಲಾ ನಮ್ಮ ತಂಡದಲ್ಲಿ ಸೇರಿಸಿಕೊಂಡೇ ನಾವು ಕ್ರಿಕೆಟ್ ಆಡಬೇಕಂತೆ! ಇಲ್ಲದಿದ್ದಲ್ಲಿ ಚೆನ್ನಾಗಿರೊಲ್ವಂತೆ! ನನ್ನ ಮೇಲೆ ಬೇಜಾನ್ ಆವಾಜ಼್'ಗಳು, ಗೂಂಡಾಗಾರಿಕೆಗಳು, ಸಿಕ್ಕಾಪಟ್ಟೆ ಧಮಕಿಗಳು.. ಅವನು ಹಾಗೆ ವರ್ತಿಸಬಹುದು ಎನ್ನುವ ಸೂಚನೆಯನ್ನು ನನ್ನ ಸ್ನೇಹಿತರು ನನಗೆ ಮೊದಲೇ ಕೊಟ್ಟಿದ್ದರು. ನಾನು ನಮ್ಮ ತಂಡದ ಕ್ರಿಕೆಟ್ ತಂಡದ ನಾಯಕನಾಗಿದ್ದೆ.

ಅವನು ನನ್ನನ್ನು ಹೆದರಿಸಲು ಎಷ್ಟು ಪ್ರಯತ್ನಪಟ್ಟರೂ ನಾನು ಜಗ್ಗಲಿಲ್ಲ. ಕೊನೆಯಲ್ಲಿ ಆತನ ಬಾಯಿಯಿಂದ 'ಆವಾಚ್ಯ ವಚನ'ಗಳ ಸುರಿಮಳೆ ಶುರುವಾಯಿತು. ಬೈಗುಳದ ಗುರಿ ನನ್ನ ಕಡೆಗೆ ಇದ್ದಷ್ಟು ಸಮಯ ಪ್ರತಿಕ್ರಿಯಿಸದೆ ಸುಮ್ಮನಿದ್ದು, ಆತನ ಶುದ್ಧ ಮಾತುಗಳೇನಿದ್ದುವೋ ಅವುಗಳಿಗೆ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದೆ.


ಒಂದು ಹಂತದಲ್ಲಿ ಬೈಗುಳದ ಗುರಿ ನನ್ನನ್ನು ದಾಟಿ ನನ್ನ ಹೆತ್ತವರ ನಿಂದನೆಗೆ ತಿರುಗಿತು. "(ಬೀ..ಪ್) ಮಗನೇ" ಅಂತ ಕೇಳಿದ ತಕ್ಷಣ ಹೇಳಿದೆ "ಬಾಯಿ ಮುಚ್ಚು.. ನಾಲ್ಗೆ ಬಿಗಿ ಹಿಡ್ದು ಮಾತಾಡು!". ನಾನಷ್ಟು ಹೇಳ್ಬೇಕಿದ್ರೆ ಅವನು ಇನ್ನಷ್ಟು ಕೆಂಡಾಮಂಡಲಗೊಂಡು ಬದಿಯಲ್ಲಿ ಸಿಕ್ಕ ಸಾಕಷ್ಟು ದೊಡ್ಡ ಕಲ್ಲೊಂದನ್ನು ಎತ್ತಿಕೊಂಡ. ಕಲ್ಲು ನನ್ನ ಕಡೆಗೆ ಗುರಿ ಮಾಡಿ "ಏಯ್ ____ ಮಗನೇ! ...." ರೋಷದಿಂದ ಏನೇನೋ ಹೇಳುತ್ತಿದ್ದ..

ಅವನಿಗೂ ನಾನು ನಿಂತಿರುವಲ್ಲಿಗೂ ಸುಮಾರು ಎರಡು ಮೀಟರ್ ದೂರ ಇದ್ದಿರಬಹುದು. ಅವನ ಕೈಯಲ್ಲಿ ಕಲ್ಲು, ನಾನು ನಿರಾಯುಧ! ಒಂದು ವೇಳೆ ಆತ ಕಲ್ಲು ಎಸೆದರೆ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಜಾಗ್ರತೆಯಿಂದ ಕಲ್ಲು ಹಿಡಿದಿದ್ದ ಆತನ ಕೈಯ ಚಲನೆಗಳನ್ನೂ ಗಮನಿಸುತ್ತಿದ್ದೆ.

ನಾನು ಹೇಳಿದೆ "ಒಂದು ಮಾತು ಹೇಳ್ತೀನಿ ಕೇಳು, ಇಲ್ಲಿ ನಾನು ಇದೀನಿ, ನೀನು ಇದೀಯಾ. ನಮ್ಮ ನಡುವಿನ ಬೈಗುಳದ ಮಾತುಗಳು ನಮ್ಮಿಬ್ರ ಬಗ್ಗೇನೇ ಇರ್ಲಿ. ಹೊರತಾಗಿ ಅದರ ನಡುವೆ ಇಲ್ಲಿಲ್ಲದ ನಮ್ಮ ಹೆತ್ತವರನ್ನ ಯಾಕೆ ತರ್ಬೇಕು? ಇಷ್ಟು ಹೊತ್ತು ನಾನು ನಿನ್ನ ತಂದೆ ತಾಯಿಗೆ ಏನಾದ್ರೂ ಅಂದಿದೀನಾ? ಇಲ್ವಲ್ಲಾ? ಹಾಗಿರೋವಾಗ ನೀನು ನನ್ನ ತಂದೆ ತಾಯಿ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಯಾಕೆ ಹಾಗೆ ಬೈತೀಯಾ? ನನಿಗೆ ಬೈದ್ರೆ ಪರ್ವಾಗಿಲ್ಲ ಸುಮ್ನಿರ್ತೀನಿ. ಅಷ್ಟಕ್ಕೂ ನಾನೆಲ್ಲಾದ್ರೂ ಬಾಯಿತಪ್ಪಿ ನಿಮ್ಮಪ್ಪ ಅಮ್ಮಂಗೆ ಬೈದಿದ್ರೆ, ಹೊಡಿಯೋ ನಂಗೆ ಕಲ್ಲು.. ಹೊಡೆದು ಸಾಯಿಸ್ಬಿಡು..", ಅಷ್ಟೆಂದು ಆತನ ಕಲ್ಲೇಟಿನಿಂದ ಹೇಗೆ ತಪ್ಪಿಸ್ಕೋಬೇಕೆಂದು ಎದುರುನೋಡ್ತಿದ್ದೆ. ಆದರೆ ನನ್ನ ಮಾತು ಕೇಳಿಸಿಕೊಂಡಿದ್ದ ಅವನಿಗೆ ಅಷ್ಟರಲ್ಲಿ ವಿಷಯ ಅರ್ಥ ಆಗಿ ಮೀಟರ್ ಆಫ್ ಆಗಿತ್ತು. ಕಲ್ಲು ಕೆಳಕ್ಕೆ ಬಿಟ್ಟ.

ಈ ಘಟನೆ ನಡೆದು ಒಂದೆರಡು ತಿಂಗಳಲ್ಲಿ ನಾವಿಬ್ಬರೂ ಪರಸ್ಪರ ಸ್ನೇಹ ಬೆಳೆಸಿಕೊಂಡೆವು. ಅವನು ಬಿಯರ್ ಕುಡಿಯುತ್ತಿರುವಾಗ ನಾನು ನೀರು ಕುಡಿಯುತ್ತಾ ಸಾಥ್ ಕೊಡ್ತಿದ್ದೆ.

ಇತೀ, ಇದಂ ಆವಾಚ್ಯವಚನಾಮೃತಸ್ಯ ಅಧ್ಯಾಯಮೇಕಂ ಸಮಾಪ್ತಂ..

..ಶುಭಂ..

Thursday, July 5, 2018

ಅರ್ಥವಾಗದ ಭಾಷೆಗೆ ಭಾವಾಭಿವ್ಯಕ್ತಿ ಹೇಗೆ?

1999ರಲ್ಲಿ ನಾನು 9ನೆಯ ತರಗತಿಯ ವಿದ್ಯಾರ್ಥಿಯಾಗಿದ್ದೆ. ಶಾಲೆಯಲ್ಲಿ ನಾನು ಭಾರತ್ ಸ್ಕೌಟ್ಸ್ ದಳದ ನಾಯಕನಾಗಿಯೂ ಇದ್ದೆ. ಶಾಲೆಯಿಂದ ಕೇರಳ ರಾಜ್ಯ ಮಟ್ಟದ ಜಾಂಬೂರಿಗೆ ಆಯ್ಕೆಯಾದ ನಾಕೈದು ಹುಡುಗರಲ್ಲಿ ನಾನೂ ಒಬ್ಬ. ಜಾಂಬೂರಿಯಲ್ಲಿ ಅನಿರೀಕ್ಷಿತವಾಗಿ ಒಂದು ರೂಪಕ ಸ್ಪರ್ಧೆ ಏರ್ಪಡಿಸಲಾಗಿತ್ತು. ತಯಾರಿ ನಡೆಸಲು ಹೆಚ್ಚು ಸಮಯ ಲಭ್ಯವಿರಲಿಲ್ಲ.
ಕೊನೆಯ ಘಳಿಗೆಯಲ್ಲಿ ನಮ್ಮ ಮೇಷ್ಟ್ರು ನನ್ನನ್ನು ಕರೆದು "ನೀನು ಮರ, ಅವನು ಮರ ಕಡಿಯುವವನು, ಉಳಿದವರೆಲ್ಲರೂ ಸ್ಕೌಟ್ಸ್. ಮರ ಕಡಿಯುವಾತ ಕೊಡಲಿ ಎತ್ತುವಾಗ ನೀನು (ಮರ) ಓಡಬೇಕು, 'ಕಾಪಾಡೀ' ಎಂದು ಅಳುತ್ತಾ ಓಡಬೇಕು. ಓಡುವಾಗ ಸ್ಕೌಟ್ಸ್ ಎಲ್ಲರೂ ಬಂದು ಮರವನ್ನು ಸುತ್ತುವರಿದು ರಕ್ಷಿಸಬೇಕು. ನಾನು ಕಮೆಂಟರಿ ಕೊಡುತ್ತಿರುತ್ತೇನೆ" ಹೀಗೆ ನಮಗೆ ಸೂಚನೆಗಳನ್ನು ನೀಡಿದರು.
ನಮ್ಮ ರೂಪಕ ಶುರುವಾದಾಗ, ಮೇಷ್ಟ್ರು ಕೊಡುತ್ತಿದ್ದ ವೀಕ್ಷಕ ವಿವರಣೆ ಮಲಯಾಳಂನಲ್ಲಿತ್ತು. ಎಲ್ಲ ಸುಸೂತ್ರವಾಗಿಯೇ ನಡೆಯುತ್ತಿದೆಯೆಂದು ಭಾವಿಸಿದ್ದೆ. ಸ್ಕಿಟ್ ಮುಗಿಯುತ್ತಲೇ "ಕೊಡುತ್ತಿದ್ದ ಕಮೆಂಟರಿಯಲ್ಲಿ ಮರ ಓಡುತ್ತಿದೆಯೆಂದು ನಾನು ಹೇಳುತ್ತಿದ್ದಾಗ ಆ ಸಮಯಕ್ಕೆ ಸರಿಯಾಗಿ ನೀನು ಓಡದೆ ಎಲ್ಲರನ್ನೂ ಪೇಚಿಗೆ ಸಿಲುಕಿಸಿದೆ. ನಿನ್ನಿಂದಾಗಿ ನಾವು ಪಟ್ಟ ಶ್ರಮವೆಲ್ಲಾ ಸಂಪೂರ್ಣವಾಗಿ ವ್ಯರ್ಥವಾಯ್ತು" ಎಂದು ನನ್ನ ಮೇಲೆ ಮುಗಿಬಿದ್ದು, ನನಗೆ ಹಿಗ್ಗಾಮುಗ್ಗಾ ಬೈದರು.
ಸ್ಕಿಟ್ ಶುರುವಾಗುವ ಕೊನೆಯ ಘಳಿಗೆಯ ತನಕವೂ ಕಮೆಂಟರಿ ಮಾಡುವ ಭಾಷೆ ಯಾವುದೆಂದು ಮೇಷ್ಟ್ರು ನನಗೆ ತಿಳಿಸಿರಲಿಲ್ಲ. ಮಲಯಾಳಂ ನನಗೆ ಗೊತ್ತಿಲ್ಲ ಎನ್ನುವ ಸತ್ಯವೂ ಅವರಿಗೆ ತಿಳಿದಿರಲಿಲ್ಲ.
ಇನ್ನು ಈಗ ತಪ್ಪು ಒಪ್ಪುಗಳ ಪ್ರಶ್ನೆಗಳಿಗಿಷ್ಟು ಬೆಂಕಿ ಹಾಕಿ. ಬದಲಿಗೆ ನಾವು ನ್ಯಾಯ  ಮತ್ತು ಧರ್ಮಗಳ ಕುರಿತು ಒಂದಿಷ್ಟು ವಿಮರ್ಶೆ ಮಾಡೋಣ.

1) ಅರ್ಥವಾಗುವ ಭಾಷೆಯಲ್ಲಿ ಹೇಳಿದ ಮಾತು ಮಾತ್ರ ನಮಗೆ ಅರ್ಥವಾಗದ ಭಾಷೆಯಲ್ಲಿ ಹೇಳಿದ ಮಾತಿಗಿಂತಲೂ ಜಾಸ್ತಿ ಚೆನ್ನಾಗಿ ಅರ್ಥವಾಗುವುದು.

2) ಹೇಳುವ ಭಾಷೆ ನಮ್ಮ ಮಾತೃಭಾಷೆಯಾಗಿದ್ದಷ್ಟು ನಮಗೆ ಅರ್ಥವಾಗುವ ಸಾಧ್ಯತೆ ಇನ್ನಷ್ಟು ಹೆಚ್ಚು.

ಮಾತುಗಳು ಬರಿದಾದಾಗ

ನಾನಂದೆ "ಒಂದು ಪೇಪರ್ ಗಂಜಿ".

ಆತ ಕೂಡಲೇ ಒಡೆದು ಕೊಟ್ಟ, ನಾನು ಕುಡಿದೆ.


ಕೊನೆಯಲ್ಲಿ ಅಸಮಾಧಾನದಿಂದ ನಾನು ಹೇಳಿದೆ, "ಇವತ್ತು ಎಳ್ನೀರ್ ಸಿಹಿಯಾಗಿಲ್ಲ. ಒಳ್ಗಡೆ ತಿನ್ನೋದಕ್ಕೆ ಕೂಡಾ ಏನೂ ಇಲ್ಲ".

ತಕ್ಷಣ ನನ್ನೆಡೆಗೆ ತನ್ನ ಕೈತೋರಿಸಿ ಆತ ಕೇಳಿದ "ಸಾರ್, ಇದು ಏನ್ಹೇಳಿ?".


ನಾನು ಯೋಚಿಸುತ್ತಿದ್ದೆ; "ನಾನೇನು ಹೇಳ್ದೆ ಇವ್ನ್ಹತ್ರ? ಜಾವಾಬಿನಲ್ಲಿ ಇವನ್ಯಾಕೆ ಬೇರಿನ್ನೇನೇನೋ ಕೇಳ್ತಿದಾನೆ ನನ್ಹತ್ರ?!!".

ನಾನು ಅವನೆಡೆಗೆ ಗೊಂದಲದಿಂದ ನೋಡುತ್ತಾ ಉತ್ತರಿಸಿದೆ, "ನಿಮ್ ಕೈ".


ಆತ ಮುಂದುವರೆಸಿದ, "ಇಲ್ಲಾ ಸರ್, ನಾ ನಿಮ್ಗೆ ತೋರಿಸ್ತಿರೋದು 5 ಬೆರಳು, ನೋಡಿ.. ಯಾವತ್ತಾದ್ರೂ ಈ ಐದೂ ಬೆರಳೂ ಒಂದೇ ಥರ ಇರೋಕ್ ಸಾಧ್ಯಾನಾ?". ಅಷ್ಟೇ, ಆನಂತರ ಅವನಿನ್ನೇನನ್ನೂ ಮಾತಾಡೋಕೆ ಹೋಗಿಲ್ಲ, ನಾನೂ ಕೂಡಾ.


ಆತನ ಆ ಪ್ರಶ್ನೆಯಲ್ಲಿ ಅಡಗಿದ್ದ ಮರ್ಮ ನನ್ನನ್ನು ಒಂದು ಕ್ಷಣಕ್ಕೆ ಧಿಙ್ಮೂಢನನ್ನಾಗಿಸಿತು.

ಆತ ನನ್ನ ಸ್ನೇಹಿತ ರೆಹಮಾನ್, ತನ್ನ SSLC ಪಾಸ್ ಮಾಡಿ ಮುಗಿಸಲು ಸಾಧ್ಯವಾಗದೆ ಬೆಂಗಳೂರಿನ ಒಂದು ಫುಟ್‌ಪಾತ್ನಲ್ಲಿ ಎಳನೀರು ಮಾರುವಾತ. ಇನ್ನೊಂದೆಡೆ ನಾನು, ಸ್ನಾತಕೋತ್ತರ ಪದವೀಧರ ಸಾಫ್ಟ್‌ವೇರ್ ಇಂಜಿನಿಯರ್. ಅಷ್ಟೇ ಅಲ್ಲ, ಆತ ವಯಸ್ಸಿನಲ್ಲಿ ನನಗಿಂತ 5-6 ವರ್ಷ ಕಿರಿಯವನು! ಆದರೆ, ಅವನ ಜೊತೆ ಅಂದು ಫುಟ್‌ಪಾತ್ನಲ್ಲಿ ನಿಂತುಕೊಂಡಿದ್ದಾಗ ನನಗನ್ನಿಸಿತು, "ಬದುಕಿನ ಪಾಠ ಕಲಿಯುವ ವಿಚಾರವಾಗಿ ವಿದ್ಯಾರ್ಹತೆ-ವಯಸ್ಸಿಗೂ ಮೀರಿ ನನ್ನನ್ನೂ ನಾಚಿಸುವಂತೆ ರೆಹಮಾನ್ ಬೆಳೆದು ನಿಂತಿದ್ದಾನೆ".

ವಿದ್ಯಾಭ್ಯಾಸ ನನ್ನ ಬುದ್ಧಿಗೆ ಇಳಿದಷ್ಟು ರೆಹಮಾನಿಗೆ ಇಳಿಯದೇ ಇರಬಹುದು, ಆದರೂ ನನ್ನ ವಿದ್ಯಾವಂತ ಬುದ್ಧಿಯ ಗರ್ವವನ್ನೆಲ್ಲ ಆತ ತನ್ನ ಒಂದೇ ಬಲವಾದ ನಾಟುವ ಮಾತಿನಿಂದ ಸಂಪೂರ್ಣ ನೆಲಸಮ ಮಾಡಿದ್ದ.


ನನ್ನ ವಯಸ್ಸು, ಅನುಭವ, ವೃತ್ತಿ, ವಿದ್ಯಾರ್ಹತೆ, ಸಾಮಾಜಿಕ ನಿಲುವು ಇವೆಲ್ಲದಕ್ಕಿಷ್ಟು ಬೆಂಕಿ ಹಾಕಿ. ಯಾಕೆಂದ್ರೆ ಅವೆಲ್ಲವೂ ತನ್ನ ಅದ್ಭುತ ಜೀವನಾನುಭವದಿಂದ ಡಾಕ್ಟರೇಟ್ ಪಡೆದವರನ್ನೂ ನಾಚಿಸಬಲ್ಲಂತಹ ನಮ್ಮ ರೆಹಮಾನನ ಬುದ್ಧಿಮತ್ತೆಯೆದುರಿಗೆ ಏನೇನೂ ಅಲ್ಲ.


ಆ ದಿನದ ನಂತರ, ನಾನು ಮಾತುಗಳನ್ನಾಡುವ ಮುನ್ನ ಒಮ್ಮೆ ಯೋಚಿಸಿ, ಆರೋಪಗಳನ್ನು ಕನಿಷ್ಠವಾಗಿಸಿ ತೀರಾ ಅಗತ್ಯವೆನಿಸಿದ್ದಾಗ ಮಾತ್ರ ಬಳಕೆ ಮಾಡುತ್ತಿದ್ದೆ.

ರೆಹಮಾನ್ ಮತ್ತು ಆತನ ತಂದೆ ನಯೀಮ್ ಅವರ ಒಂದು ವಿಶೇಷತೆ ಹೀಗಿದೆ. ಎಳನೀರಿನ ರಾಶಿಯ ಸುತ್ತಲೂ ಮತ್ತು ರಾಶಿಯ ಕೆಳಭಾಗದಲ್ಲೂ ಕೆಲವು ಇಲಿಗಳು ರಾಜಾರೋಷವಾಗಿ ಓಡಾಡುತ್ತಿದ್ದವು. ಆದರೆ, ರೆಹಮಾನ್ ಹಾಗೂ ಅವನ ತಂದೆ ಯಾವತ್ತಿಗೂ ಇಲಿಗಳನ್ನು ಕೊಲ್ಲಬೇಕೆಂದು ಅವುಗಳಿಗೆ ವಿಷ ತಿನ್ನಿಸಿದವರಲ್ಲ! ಬದಲು, ಉಳಿದ ಎಳನೀರಿನ ಚಿಪ್ದಪುಗಳಿಂದ ತೆಂಗಿನಕಾಯಿಯನ್ನು ಇಲಿಗಳಿಗೆ ತಿನ್ನಿಸುವಾಗ ಅವರಿಬ್ಬರ ಮುಖದಲ್ಲಿದ್ದ ಆತ್ಮಸಂತೃಪ್ತಿಯ ನಗು ವರ್ಣಿಸಲಸದಳ. ಅವರಿಬ್ಬರ ಮುಖದಲ್ಲಿದ್ದ ಆ ಸಂತಸವನ್ನು ವಿವರಿಸಲು ನನ್ನಲ್ಲಿ ಪದಗಳೇ ಇಲ್ಲ..


Tuesday, February 14, 2017

ಭಾಷೆ ಯಾವುದಯ್ಯಾ? ನಾಡು ಯಾವುದಯ್ಯಾ?

ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಒಂದು ದಿನ ಬೆಳಿಗ್ಗೆ ಮೆಸ್'ನಲ್ಲಿ ತಿಂಡಿ ತಿಂದು, ನನ್ನ ಬಿಡಾರಕ್ಕೆ ಕಾಲ್ನಡಿಗೆಯಲ್ಲಿ ಮರಳುತ್ತಿದ್ದೆ.
ನಾನು ಅಂಗಿ ಮತ್ತು ಕೇಸರಿ ಲುಂಗಿಯಲ್ಲಿದ್ದೆ.
ಆ ಉಡುಗೆಯಲ್ಲಿ ನನ್ನನ್ನು ಕಂಡಾಗ ನಾನು ಬೇರೆ ಊರಿಂದ ಮೈಸೂರಿಗೆ ಬಂದವನು ಎಂದು ನೋಡುಗರು ನಿರ್ಧರಿಸಿದರೆ ಅದು ಸಹಜವೇ.
ಎಡಗೈಯಲ್ಲಿ Nokia 1100 ಮೊಬೈಲ್ ಇತ್ತು.
ಮೆಸೇಜ್ ಓದುತ್ತಾ ಖಾಲಿ ನಿರ್ಜನ ಗಲ್ಲಿ ರಸ್ತೆಯ ಅತ್ಯಂತ ಎಡಭಾಗದಲ್ಲಿ ಮನೆಯ ಕಡೆಗೆ ನಡೆಯುತ್ತಿದ್ದೆ.
 
ನಾನು ಉಳಿದುಕೊಂಡಿದ್ದ ಮನೆಯನ್ನು ಸಮೀಪಿಸುತ್ತಿರುವಂತೆ ದೂರದಲ್ಲಿ ಒಂದು ಬೈಕ್ ಎದುರುಗಡೆಯಿಂದ ವೇಗವಾಗಿ ಬರುತ್ತಿದ್ದುದನ್ನು ಒಮ್ಮೆ ಗಮನಿಸಿದೆ.
ಆ ಬೈಕ್ ರಸ್ತೆಯ ಸಾಕಷ್ಟು ಬಲ ಭಾಗದಲ್ಲಿ ಬರುತ್ತಿರುವುದನ್ನು ಗಮನಿಸಿದ ಮೇಲೆ ಪುನಃ ಕಣ್ಣು ಮೊಬೈಲ್'ನೆಡೆಗಿಳಿಸಿ ನಾನು ನನ್ನಷ್ಟಕ್ಕೆ ಓದುತ್ತಾ,  ನಡೆಯುತ್ತಾ ಮುಂದುವರಿದೆ.
ಸ್ವಲ್ಪ ಕ್ಷಣದಲ್ಲೇ ಆ ಬೈಕ್ ತುಸು ಕಡಿಮೆ ವೇಗದಿಂದ ನೇರವಾಗಿ ನನ್ನ ಎದುರಿಗೇ ಬರುತ್ತಿದ್ದುದನ್ನು ನೋಡಿ ತಬ್ಬಿಬ್ಬಾದೆ.
ಎದುರು ಬರುತ್ತಿದ್ದ ಬೈಕ್'ನ ಹಾದಿಯಿಂದ ತಪ್ಪಿಸಿಕೊಳ್ಳಲು ನಾನು ಎಡಕ್ಕೆ ಸರಿದಾಗ ಬೈಕ್ ಸವಾರನೂ ಬೈಕನ್ನು ಎಡಕ್ಕೆ ತಿರುಗಿಸಿದ, ನಾನು ಬಲಕ್ಕೆ ಸರಿದಾಗ ಬೈಕ್ ಸವಾರನೂ ತನ್ನ ಬೈಕ್ ಬಲಕ್ಕೆ ತಿರುಗಿಸಿದ.

ನಾನು ತಕ್ಷಣ ಎಡಕ್ಕೆ ಸರಿದು, ಬೈಕನ್ನು ದಾಟಿ, ಮನೆಕಡೆಗೆ ನಡೆಯುತ್ತಿದ್ದಂತೆ ಬೈಕ್ ಸವಾರನ ಬಾಯಿಂದ ಅವಾಚ್ಯ ನಿಂದನೆ ಕೇಳಿತು, "ಬೋ_ ಮಗನೇ..! ಸೈಡಿಗೋಗಲೋ ಲೋ_ರ್..!".
ಅಲ್ಲಿಯ ತನಕ ಆತ ಉದ್ದೇಶಪೂರ್ವಕವಾಗಿಯೇ ಮಾಡಿದ ಚೇಷ್ಟೆಯನ್ನು ಸಹಿಸಿದ್ದೆ.
ಆದರೆ ಈ ಮಾತು ಮಾತ್ರ ನನ್ನಿಂದ ಸಹಿಸಲಾಗಲಿಲ್ಲ.
ನಡು ರಸ್ತೆಗೆ ಬಂದು ನಿಂತು, ತಿರುಗಿ ಅವನನ್ನೇ ಒಮ್ಮೆ ದಿಟ್ಟಿಸಿ ನೋಡಿದೆ.
ತಿರುಗಿ ನೋಡಿದಾಗ ಆತನೂ ಗುಡುಗುಡು ಸದ್ದು ಮಾಡುತ್ತಿದ್ದ ಬೈಕ್ ನಿಲ್ಲಿಸಿಕೊಂಡು ನನ್ನೆಡೆಗೆ ಕೆಕ್ಕರಿಸಿ ನೋಡುತ್ತಿದ್ದ.
ಒಂದು ಕ್ಷಣ ನಮ್ಮ ನಡುವೆ ದೃಷ್ಟಿಯುದ್ಧ ನಡೆಯಿತು.
ಅವನು "ಏನ್, ಗುರಾಯಿಸ್ತೀಯಾ?! ನಿನ್ನ__!!" ಎಂದು ಕುಳಿತಲ್ಲಿಂದಲೇ ತಿರುಗಿ ನನ್ನೆಡೆಗೆ ಆವಾಜ಼್ ಎಸೆದ.

ನಾನು ಮೊಬೈಲ್ ಅಂಗಿಯ ಜೇಬಿಗಿಳಿಸಿ ತಿರುಗಿ ನಿರ್ಭಾವುಕವಾಗಿ ಆತನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಾ ನೇರವಾಗಿ ಅವನೆಡೆಗೇ ಬಿರುಸಾಗಿ ನಡೆಯತೊಡಗಿದೆ.
ನನ್ನ ಪ್ರತಿಕ್ರಿಯೆ ಕಂಡು ಆತ ಇಳಿದು ತನ್ನ ಬೈಕ್ ಬದಿಗೆ ಹಾಕಿ  ನಾನು ಅವನನ್ನು ಸಮೀಪಿಸುತ್ತಿದ್ದಂತೆ "ಏನೋ?!! ನಂಗ್ ಹೊಡಿತೀಯಾ? ದೊಡ್ ಫೈಟರಾ ನೀನು?!" ಎಂದು ನನ್ನ ಬುರುುಡೆಯೊಳಗೆ ಏಳುತ್ತಿದ್ದ ರೋಷದ ಕಿಚ್ಚಿಗೆ ಇನ್ನಷ್ಟು ತುಪ್ಪ ಸುರಿಯತೊಡಗಿದ.
ಅವನ ಮಾತಿಗೆ ಪ್ರತಿಕ್ರಿಯಿಸದೆ ನಾನು ಕೈ ಚಾಚಿ ಶೇಕ್ ಹ್ಯಾಂಡ್ ನೀಡುತ್ತಾ ತುಸು ಗಂಭೀರವಾಗಿ, ತೀಕ್ಷ್ಣವಾಗಿ ಅವನ ಕಣ್ಣುಗಳನ್ನೇ ನೋಡುತ್ತಾ ಮಾತನಾಡಿದೆ: "ನನ್ ಹೆಸ್ರು ಪ್ರಸಾದ್. ನಿಮ್ ಹೆಸ್ರೇನು?".
ನನ್ನ ಜೊತೆ ಹೊಡೆದಾಟಕ್ಕೆ ಸಿದ್ಧನಾಗಿದ್ದ ಆತ ಶೇಕ್ ಹ್ಯಾಂಡ್ ನಿರೀಕ್ಷಿಸಿಯೇ ಇರಲಿಲ್ಲ.
ಬಹಳ ನಿಸ್ತೇಜವಾಗಿ ನನ್ನ ಕಡೆಗೆ ಹಸ್ತಲಾಘವಕ್ಕೆಂದು ಕೈ ಚಾಚಿದ ಆತ "ಹೆಸ್ರೆಲ್ಲಾ ಯಾಕೆ ಬೇಕು?" ಅಂತ ಕೇಳಿದ.
ನಾನು ಕೇಳಿದೆ "ಯಾವೂರು ನಿಮ್ದು?".
ಆತ ಹೇಳಿದ "ಇದೇ ಊರು, ಹುಟ್ಟಿ ಬೆಳ್ದಿದ್ದೆಲ್ಲಾ ಇಲ್ಲೇ. ಈ ಏರಿಯಾ ಎಲ್ಲಾ ನಮ್ದೇ..! ಏನೀಗ?".
ಅವನ ಮುಖದಲ್ಲಿ ನನ್ನೆಡೆಗೆ ತಾತ್ಸಾರದ ಒಂದು ಕಿರುನಗೆಯಿತ್ತು.

ನಾನೆಂದೆ, "ಇವತ್ತಿನ್ ಥರಾನೇ ನಾಳೆ ಇನ್ನೊಂದು ದಿನ ನಾನು ಇದೇ ರಸ್ತೇಲಿ ನಡ್ಕೊಂಡು ಹೋಗ್ತಿರ್ಬೇಕಾದ್ರೆ ನೀವು ಹುಷಾರು ತಪ್ಪಿ ರಾಂಗ್ ಸೈಡಲ್ಲಿ ಬಂದು ನನ್ನ ಮೇಲೆ ಇನ್ನೊಮ್ಮೆ ಬೈಕ್ ಹತ್ಸೋಕೆ ಬಂದ್ರೆ ಮತ್ತೊಮ್ಮೆ ನಾನು ನಿಮ್ಮನ್ನ ಎಚ್ಚರ್ಸೋಕೆ ಅಂತ ನಿಮ್ಮ ಹೆಸ್ರು ಕೇಳ್ದೆ. ಮನಬಂದ್ಹಾಗೆ ನಿಮ್ಗೆ ಹೆಸರಿಟ್ಟು ನಾನು ನಿಮ್ಮನ್ನ ಕರೆಯೋದು ಹಾಗಿಲ್ಲ, ನೀವು ಇದೇ ಊರವ್ರು, ಊರೆಲ್ಲಾ ನಿಮ್ದೇಂತ ನೀವು ಅಂದ್ಹಾಗೇನೇ ನಿಮ್ಮ ಹೆತ್ತವರು ಪ್ರೀತಿಯಿಂದ ನಿಮ್ಗಿಟ್ಟ ಹೆಸರು ಕೂಡಾ ನಿಮ್ಮದೇ ಅಲ್ವಾ?".  ನನ್ನ ಕೊನೆಯ ಮಾತುಗಳನ್ನ ಕೇಳಿದಾಗ ಆತ ದುಡುಕಿ ತಾನಾಡಿದ್ದ ಕೀಳು ಮಾತುಗಳ ಬಗ್ಗೆ ಪ್ರಜ್ಞೆ ಮೂಡಿದ ಲಕ್ಷಣಗಳು ಅವನ ಮುಖ ಮತ್ತು ದೇಹಭಾವದಲ್ಲಿ ಎದ್ದು ಕಾಣಿಸುತ್ತಿತ್ತು.

ಮಾತು ಮುಂದುವರಿಸಿದ ನಾನು, "ನಾನು ನನ್ನ ಪಾಡಿಗೆ ರಸ್ತೆಯ ತೀರಾ ಎಡ ಭಾಗದಲ್ಲಿ ನಡ್ಕೊಂಡು, ಮೊಬೈಲ್ ನೋಡ್ಕೊಂಡು ಬರ್ತಿದ್ದಂತೆ. ಬಲಗಡೆಯಲ್ಲಿ ನಿಮ್ಗೆ ಬೈಕ್ ಓಡ್ಸೋದಕ್ಕೆ 2 Metersಗೂ ಮೇಲೆ ಬೇಜಾನ್ ಜಾಗ ಇತ್ತು. ಆದ್ರೂ ನೀವು ನಿಮ್ಮ ಬೈಕನ್ನ ನನ್ ಮೇಲೇನೇ ಓಡ್ಸೋಕೆ ಯಾಕೆ ಬಂದ್ರಿ ಅಂತ ಗೊತ್ತಾಗ್ಲಿಲ್ಲ.
ಆಮೇಲೆ ನೀವು ನಂಗೆ 'ಸೈಡಿಗೋಗೋ' ಅಂತ ಹೇಳಿದ್ರಿ.
ಹಾಗನ್ಬೇಕಿದ್ರೆ ನೀವು ಇನ್ನೇನೋ ಒಂದೆರಡು ಮಾತು ಆಡಿದ್ರಿ. ಆ ಸಂದರ್ಭದಲ್ಲಿ ನೀವಾಡಿದ್ದ ಸುಭಾಷಿತ(?)ಗಳು ನಂಗಿನ್ನೂ ಅರ್ಥ ಆಗಿಲ್ಲ, ಯಾಕಂದ್ರೆ ನಮ್ಮೂರು ಕಾಸರಗೋಡು, ಕರ್ನಾಟಕದವ್ನಲ್ಲ, ಆದ್ರೂ ನಾನೊಬ್ಬ ಕನ್ನಡಿಗ.
ನನ್ನ ಕೂಗೋದಿಕ್ಕೆ ನಿಮ್ಗೆ ಗೊತ್ತಿರ್ಲಿ ಅಂತ ನಾನು ನಿಮ್ಗೆ ನನ್ ಹೆಸ್ರು ಹೇಳಿದ್ದು, ಅದೇ ಉದ್ದೇಶದಿಂದಾನೇ ನಾನು ನಿಮ್ ಹೆಸ್ರೇನಂತಾನೂ ಕೇಳ್ದೆ.
ನಿಮ್ ಭಾಷೆ ಅರ್ಥ ಆಗ್ದಿದ್ದಕ್ಕೆ ನಿಮ್ಮೂರ್ ಯಾವ್ದೂಂತ ವಿಚಾರಿಸ್ದೆ, ನಮ್ಮೂರು ಯಾವ್ದುಂತಾನೂ ಹೇಳ್ದೆ.

ಆದ್ರೂ ನೀವು ಆವಾಗ ಮೊದಲಲ್ಲಿ ನನ್ನ ಜೊತೆ ಆಡಿದ್ ಮಾತು ಏನೂಂತ ನಂಗಿನ್ನೂ ಅರ್ಥ ಆಗ್ಲಿಲ್ಲ. ಅದೇನೂಂತ ಸ್ವಲ್ಪ ಹೇಳ್ತೀರಾ?". ಉತ್ತರಕ್ಕಾಗಿ ಅವನ ಮುಖವನ್ನೇ ನೋಡುತ್ತಾ ಕಾಯುತ್ತಿದ್ದೆ.

ಒಂದು ಕ್ಷಣ ಯೋಚಿಸತೊಡಗಿದವನು ಸಾವರಿಸಿಕೊಂಡು, ಗೌರವಪೂರ್ಣ ಧ್ವನಿಯಲ್ಲಿ "ಅದೇನೂ ಇಲ್ಲಾ ಬಿಡೂ ಗುರೂ. ರೋಡಲ್ಲಿ ಮೊಬೈಲ್ ನೋಡ್ಕೊಂಡ್ ಹೋಗ್ಬೇಕಿದ್ರೆ ಸ್ವಲ್ಪ ಹುಷಾರಾಗ್ ಹೋಗೀ ಅಂದೆ. ಅಷ್ಟೇ ಗುರೂ.." ಎಂದು ಮುಖದಲ್ಲಿಲ್ಲದ ಕೃತಕ ನಗು ತಂದು ನನ್ನನ್ನು ಸಮಾಧಾನಿಸತೊಡಗಿದ.

"ನಿಜ್ವಾಗ್ಲೂ ಅಷ್ಟೇನಾ? ಸರಿ, ನಾ ಹೋಗ್ತೀನಿ, ಬಾಯ್.." ಅಂದು ನಾನು ಅಲ್ಲಿಂದ ಹೊರಡುವುದರಲ್ಲಿದ್ದೆ.
ಆಮೇಲೆ ನನ್ನನ್ನು ಪುನಃ ತಡೆದು ಸೌಮ್ಯವಾಗಿ "ನನ್ ಹೆಸ್ರು ___ ಅಂತ. ಇದೇ ಪಕ್ಕದ್ ರಸ್ತೇಲಿ ನಮ್ಮನೆ. ನಾ ನಂದೇ ಯಾವ್ದೋ ಟೆನ್ಶನಲ್ಲಿ ಗಾಡಿ ಓಡಿಸ್ಕೊಂಡು ಹೋಗ್ತಿದ್ದೆ. ಕೋಪ ಮಾಡ್ಕೋಬೇಡಾ ಗುರೂ.." ಅಂದು ತನ್ನ ತಪ್ಪಿಗೆ ತೇಪೆಹಚ್ಚುವ ಕೆಲಸ ಮಾಡತೊಡಗಿದ.

ಇದಾದ ನಂತರ ನಾವಿಬ್ಬರು ಹಾದಿಯಲ್ಲಿ ಮುಖಾಮುಖಿಯಾದ ಪ್ರತಿ ಬಾರಿ ಆತ ಅತಿವಿನಯ ಪ್ರದರ್ಶನ ಮಾಡಿ ನನಗೆ "ಹಾಯ್ ಪ್ರಸಾದ್" ಎಂದು ಒಂದು ಸೆಲ್ಯೂಟ್ ಹೊಡೆಯುತ್ತಿದ್ದ. ಆತ ತನ್ನ ಅಭಿಮಾನದೊಂದಿಗೆ ನನಗೆ ಕೊಡುತ್ತಿದ್ದ ಸೆಲ್ಯೂಟ್'ನಲ್ಲಿ ನನನಾಗಿದ್ದ ಹಳೆಯ ಅವಮಾನ, ಸಿಟ್ಟುಗಳನ್ನೆಲ್ಲ ಮರೆತು, ನಾನು ಹಿಂದೊಮ್ಮೆ ಪೊಲೀಸ್ ಅಥವಾ ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡಲು ಹಂಬಲಿಸಿದ್ದಾಗ ಕಂಡಿದ್ದ ಕನಸಿನ ರುಚಿಯನ್ನು ಆತನ ಅಭಿಮಾನದ ಸೆಲ್ಯೂಟಿನಲ್ಲಿ ಕಾಣುತ್ತಿದ್ದೆ.

ಒಮ್ಮೆ ನೋಡಿದ ನನ್ನ ರೂಂ ಮೇಟ್, ನನ್ನಣ್ಣ ಕೇಳಿದ,  "ಅವ್ನು ಯಾರು ಮಾರಾಯಾ..?!! ಹಾದಿಬೀದಿಯಲ್ಲಿ ಹೋಗುವವ್ರೆಲ್ರಿಗೂ ನೀನು ಪರಿಚಯ ಆಗಿದೀಯಾ!!".
ಅಣ್ಣನಿಗೆ ___ನ ಪುರಾಣ-ಲೀಲೆಗಳನ್ನೆಲ್ಲಾ ತಿಳಿಸಿದೆ.
ಅಣ್ಣ "ರೋಡಲ್ಲಿ ನಡೆಯುವಾಗ ಮೊಬೈಲು ಕುಟ್ಟಿಕೊಂಡು ಹೋಗಿದ್ದು ನಿನ್ನ ತಪ್ಪು. ನಿನ್ನಲ್ಲಿ ತಪ್ಪು ಇಟ್ಟುಕೊಂಡು ನೀನು ಎಂತ ಮಾತಾಡ್ಲಿಕ್ಕೆ ಹೋಗೂದಾ ಅಂಥವರತ್ರ..?" ಎಂದ..!
ಸುಮ್ಮನೇ ಕಾಲ ಕಳೆಯುತ್ತಿರುವಾಗ ಒಮ್ಮೊಮ್ಮೆ ನನ್ನ ಕಾಲೆಳೆಯುವುದು ಅಣ್ಣನಿಗೆ ಬಹಳ ಖುಷಿ ತರುವ ಕೆಲಸ.

ನಾನೆಂದೆ, "ಮೊಬೈಲಿಗಿಷ್ಟು ಮಣ್ಣು ಹಾಕು. ಮೊಬೈಲ್ನಲ್ಲಿ ಮುಳುಗಿಕೊಂಡು ಒಂದ್ವೇಳೆ ನಾನು ನಡು ರಸ್ತೆಯ ಮೇಲೆ ಓಡಾಡಿದ್ದರೆ ಅದು ಖಂಡಿತಾ ನನ್ನದೇ ತಪ್ಪೂಂತ ಒಪ್ಕೊಳ್ತೇನೆ.

ಈ ಬೈಕು, ಕಾರು ಎಲ್ಲಾ ವಾಹನಗಳು ಬರೂದಕ್ಕೆ ಮೊದಲು ಪ್ರತಿ ಒಬ್ಬ ಮನುಷ್ಯನೂ ನನ್ನ ಥರಾನೇ ಸಾಮಾನ್ಯ ಕಾಲ್ನಡಿಗೆಯಲ್ಲಿ ನಡೀತಿದ್ದ ಅನ್ನೂದು ಪ್ರತಿ ಒಬ್ಬ  ಚಾಲಕನಿಗೂ ತಲೆಯಲ್ಲಿರ್ಬೇಕು. ಪ್ರತಿಯೊಂದು ವಾಹನದ ಚಾಲಕನೂ ಪಾದಾಚಾರಿಗಳಿಗೆ ಅವರ ಪಾಡಿಗೆ ಸ್ವತಂತ್ರರಾಗಿ ನಡೆದಾಡಲು ಅಡ್ಡಿಮಾಡದಿದ್ದು ಒಂದು ಕನಿಷ್ಟ ಮಾನವೀಯ ಕಾಳಜಿ ತೋರಬೇಕು.
ನನ್ಹತ್ರ ಬೈಕು ಇದೆ, ನನ್ಹತ್ರ ಕಾರು ಇದೆ ಅಂತ ಸೊಕ್ಕಿನ ಅಮಲಿನಲ್ಲಿ ಮೆರೆಯುವಾಗ ನನ್ನಂತಹ ಬಡಪಾಯಿ ನಟರಾಜ ಸರ್ವಿಸ್ ಪಾದಾಚಾರಿಗಳ ಬಗ್ಗೆ ಕನಿಷ್ಟ ಮಟ್ಟದ ಕರುಣೆಯೂ ಇರ್ಬೇಕು.

ಇದು ಎಲ್ಲದಕ್ಕೂ ಮೇಲೆ, ನಾನು ಹೋಗಿ ಅವನತ್ರ ಮಾತಾಡುವಷ್ಟು ನನ್ನನ್ನು ಕೆರಳಿಸಿದ್ದು ಆತ ಬಳಸಿದ ಆವಾಚ್ಯ ಶಬ್ದಗಳು. ಒಂದು ಭಾಷೆ ಕನ್ನಡ ಬರ್ತದೆ ಅಂದ್ರೆ ಅದ್ರಲ್ಲಿ ಅಷ್ಟೊಂದು ಅಸಹ್ಯವಾಗಿ ಮಾತಾಡ್ಬಾರ್ದು ಅನ್ನೂದ್ರ ಅರಿವು ಅವ್ನಿಗೆ ಬರಿಸ್ಬೇಕಿತ್ತು. ಅವ್ನಿಗೆ ಒಳ್ಳೆಯ ಭಾಷೆ, ನಡತೆ ಹೊರ ರಾಜ್ಯದಿಂದ ಬಂದ ನನ್ನಿಂದ ಕಲೀಬೇಕಾಯ್ತು ಅಂತ ನಿಂಗೆ ಯಾಕೆ ಅನ್ನಿಸ್ತಿಲ್ಲಣ್ಣಾ..?".

"ಅಂಥ ಒರಟು ಮನುಷ್ಯರ ಒಟ್ಟಿಗೆ ಸುಮ್ಮನೇ ಅನಗತ್ಯ ಮಾತುಕತೆ ನಿಂಗೆ ಯಾಕೆ ಬೇಕು? ಜಗತ್ತನ್ನು ನೀನು ತಿದ್ಲಿಕ್ಕೆ ಹೋಗ್ಬೇಡ  ಮಾರಾಯಾ.." ಎಂದ ಅಣ್ಣ,
ಇನ್ನೇನು ಅಣ್ಣನಿಗೆ ಉತ್ತರ ಕೊಡೋಣ ಅಂತ ನಾನು ಉಸಿರೆತ್ತುವಾಗ, ನನ್ನನ್ನು ಮಾತಾಡಲು ಬಿಡದೆ ದನಿಯೇರಿಸಿ, "ಅಯ್ಯೋ! ನಿನ್ನತ್ರ ಮಾತಾಡ್ಲಿಕ್ಕೆ ಬಂದದ್ದೇ ದೊಡ್ಡ ತಪ್ಪಾಯ್ತು, ದಮ್ಮಯ ನನ್ನನ್ನು ಒಮ್ಮೆ ಬಿಟ್ಟುಬಿಡು ಮಾರಾಯಾ(ಬೇತಾಳ!).." ಅಂತ ಹೇಳಿದಾಗ ನನ್ನ ರೋಷ ಪೂರ್ತಿ ಇಳಿದು, ನಾನೂ ಅವನ ಜೊತೆಗೆ ನಗತೊಡಗಿದೆ..

Friday, July 24, 2009

ಉದರನಿಮಿತ್ತಂ


ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |
ಧೃಷ್ಟಧಣಿಯೂಳಿಗಕೆ ಸೊಟ್ಟು ಮೈಬಾಗು ||
ಹಿಟ್ಟಿಗಗಲಿದ ಬಾಯಿ, ಬಟ್ಟೆಗೊಡ್ಡಿದ ಕೈಯಿ |
ಇಷ್ಟೇ ನಮ್ಮೆಲ್ಲ ಕಥೆ ಮಂಕುತಿಮ್ಮ ||

ಭಾವಾರ್ಥ: ನಮ್ಮ ಬಾಳಲ್ಲಿ ಹೊಟ್ಟೆರಾಜನದು ನಿತ್ಯದ ಅಟ್ಟಹಾಸ. ಅದಕ್ಕಾಗಿ ಹಸಿವು ಹಿಂಗಿಸಲು ಕಡುಕ್ರೂರಿ ಒಡೆಯನಲ್ಲಿ ಮೈಬಾಗಿ ಸೇವೆ. ನಮ್ಮ ಕತೆಯ ಸಾರಾಂಶವೆಂದರೆ ತುತ್ತಿಗಾಗಿ ಬಾಯಿ, ಬಟ್ಟೆಗಾಗಿ ಚಾಚಿದ ಕೈಯಿ.

ಆ ದಿನ ನನ್ನ ಕಣ್ಣುಗಳನ್ನ ನಾನೇ ನಂಬಲಾರದಂಥ ಪರಿಸ್ಥಿತಿ. ಅಥವಾ, ನನ್ನ ನಾಲಿಗೆಯನ್ನ ನಾನು ಸಂಶಯದಿಂದ ಕಾಣಬೇಕಿರುವ ಪರಿಸ್ಥಿತಿ ಬರಲಿದೆಯೆಂಬ ಒಂದು ಸಣ್ಣ ಸುಳಿವು ಕೂಡಾ ನನಗಿರಲಿಲ್ಲ. ಆದಿನ ಮಧ್ಯಾಹ್ನದ ತನಕ ಅದೊಂದು ಬರಿಯ ಮಾಮೂಲಿ ಆದಿತ್ಯವಾರ ಆಗಿತ್ತಷ್ಟೇ. ನನಗೆ ಅಂದು Class ಇರಲಿಲ್ಲ, ದೊಡ್ಡಕ್ಕನಿಗೆ ಅಂದು Duty ಕೂಡಾ ಇರಲಿಲ್ಲ. ಸಣ್ಣಕ್ಕನಿಗೆ Duty ಇತ್ತು.

ಬಿಸಿಲು ನೆತ್ತಿಗೇರಿ, ಗಂಟೆ ಒಂದಾಗುವ ತನಕ ಸುಮ್ಮನೆ ಕುಳಿತಿದ್ದೆ. ಆಮೇಲೆ ಸುಮ್ಮನಿರಲು ಸಾಧ್ಯವಾಗೀತೇ? ಹೊಟ್ಟೆ ತಾಳ ತಾರಕಕ್ಕೇರತೊಡಗಿತ್ತು. ಅಂದಿನ ತನಕ ಅಕ್ಕಂದಿರು ಅಡುಗೆ ಮಾಡುತ್ತಿದ್ದರೆ, ತರಕಾರಿ ಹೆಚ್ಚಿ ಕೊಡುವುದು ಇತ್ಯಾದಿ ಬಾಲಂಗೋಚಿ ಕೆಲಸಗಳಿಗೆ ನಾನು ಸೀಮಿತನಾಗಿದ್ದೆ.

ಪಾತ್ರೆಗಳೆಲ್ಲ ತೊಳೆದಿಟ್ಟು, ಸೊಂಟದ ಮೇಲೆ ಕೈ ಇಟ್ಕೊಂಡು, style ಆಗಿ ಮೆಲ್ಲನೆ ಅಕ್ಕನ ಹತ್ತಿರ ಬಂದು, ಅಡುಗೆ ಏನು ಮಾಡೋಣ?” ಎಂದು ಕೇಳಿದೆ.

ಈಗ ಸಾಂದರ್ಭಿಕ ಕಗ್ಗವೊಂದರೊಂದಿಗೆ ಒಂದು ಪುಟ್ಟ ವಿರಾಮ ತಗೊಳ್ಳಿ:

ಹೇಳಲಾಗದ ಹಸಿವು, ತಾಳಲಾಗದ ತಪನೆ |
ಆಳದಲಿ ನಾಚನಾಗಿಪ ಚಿಂತೆಯೂಟೆ ||
ಗಾಳಿಯೆತ್ತೆತ್ತಣಿನೊ ತಂದೀವ ಸೋಂಕು ಇವೆ |
ಬಾಳ ಸಾಮಗ್ರಿಯಲ ಮಂಕುತಿಮ್ಮ ||

ಭಾವಾರ್ಥ: ಹೇಳಲಾಗದಷ್ಟು ಹಸಿವು, ತಾಳಲಾಗದಷ್ಟು ಬೇಗೆ, ಒಳಗೆ ನಾಚಿಕೆಯಾಗುವಷ್ಟು ಚಿಂತೆಯ ಚಲುಮೆ. ಗಾಳಿ ಎಲ್ಲಿಂದಲೋ ತರುವ ಸೋಂಕು ಬೇರೆ. ಇವೇ ಬದುಕಿನ ಸಾಮಗ್ರಿಗಳಾಗಿವೆ.

Bloggingನಲ್ಲಿ ಮುಳುಗಿದ್ದವಳಿಗೆ ಯಾರು ಏನು ಕೇಳಿದ್ರೂಂತ ಗೊತ್ತಾಯ್ತೋ ಇಲ್ಲವೋ ಗೊತ್ತಿಲ್ಲ, ಅಕ್ಕ ಏನಾದ್ರೂ ಸರಿ, ನೀನೇ ಏನೋ ಒಂದು ಅಡುಗೆ ಮಾಡು ಅಂದೇ ಬಿಡಬೇಕೇ?!! ಉಫ್ಫ್..! ಒಂದು ಕ್ಷಣಕ್ಕೆ ಬುದ್ಧಿ ಮಂಕಾದಂತಾಯಿತು. ಆದರೆ ಆ ಕ್ಷಣಕ್ಕೆ ನಾನು ಸೋಲೊಪ್ಪಲಿಲ್ಲ. ತಕ್ಷಣ ನನ್ನೊಳಗಿನ ಕ್ರಾಂತಿಕಾರಿ ಮನಸ್ಥೈರ್ಯ ಎಚ್ಚರಗೊಂಡಿತು. ಹಸಿವಿನಲ್ಲಿ ಕಣ್ಣು ಕಾಣಿಸುತ್ತಿರಲಿಲ್ಲ, ಏನಾದರೂ ಸರಿ, ಇಂದು ಅಡುಗೆ ಮಾಡಿಯೇ ತೀರಬೇಕೆಂದು ನಿರ್ಧರಿಸಿ ಇದನ್ನೊಂದು ಪಂಥಾಹ್ವಾನದಂತೆ ಸ್ವೀಕರಿಸಿದೆ.

ಆಮೇಲೆ ನಡೆದದ್ದು ಇತಿಹಾಸ! ಸ್ನೇಹಿತರೇ, ನನ್ನ ಜೀವನದಲ್ಲಿ ಮೊತ್ತ ಮೊದಲ ಬಾರಿ ನಾನು ಸಂಪೂರ್ಣ ಅನ್ನ-ಸಾಂಬಾರು ಮಾಡಿದ, ನನ್ನಂತಹ ಅಡುಗೆ ಮಾಡಲರಿಯದ ಬಡಪಾಯೀ ಅವಿವಾಹಿತ ಹುಡುಗನಿಗೆ ಸ್ಫೂರ್ತಿಯಾಗಬಹುದಾದ, ಮೈ ನವಿರೇಳಿಸುವ ರೋಚಕ ಸನ್ನಿವೇಶವನ್ನ ನಿಮ್ಮ ಮುಂದಿಡಲಿದ್ದೇನೆ, ಓದಿ..

ಈ ಅನ್ನ+ಸಾಂಬಾರು ನಾನು ನಾಲ್ಕು ಸುದೀರ್ಘ ಹಂತಗಳಲ್ಲಿ ಮಾಡಿದ ಕರ್ಮಸಾಧನೆಯಾಗಿದೆ.

ಹಂತ#1:

ದೀರ್ಘವಾಗಿ ಒಮ್ಮೆ ಉಸಿರೆಳೆದುಕೊಂಡೆ.
ಎರಡೂವರೆ ಲೋಟ ಅಕ್ಕಿ Cookerನಲ್ಲಿ ಸುರಿದು, ಅಕ್ಕಿಯನ್ನು ಎರಡು ಬಾರಿ ಚೆನ್ನಾಗಿ ನಲ್ಲಿ ನೀರಿನಲ್ಲಿ ತಿಕ್ಕಿ ತೊಳೆದು, ಉಸಿರು ಬಿಗಿಹಿಡಿದು, (ಸರಿಯಾಗಿ ಎಣಿಸಿ) 5 ಲೋಟ ಕುಡಿಯುವ ನೀರು ಸುರಿದು, ಮುಚ್ಚಳದಲ್ಲಿ Gasket ಇದೆಯೆನ್ನುವುದನ್ನ ಧೃಡಪಡಿಸಿಕೊಂಡು, Cookerನ ಮೇಲೆ ಅದರ ಮುಚ್ಚಳವನ್ನಿಟ್ಟು ಭದ್ರಪಡಿಸಿ, ಮುಚ್ಚಳದ ಮೇಲೆ Weight ಇಟ್ಟು, ಉರಿಯುತ್ತಿರುವ Gas Stoveನ ಮೇಲೆ ಈ Cookerನ್ನ ಏರಿಸಿ, ನಿರಾಳವಾಗಿ ಉಸಿರು ಬಿಟ್ಟೆ. ಅಂತೂ ನಿರಾತಂಕವಾಗಿ ಅಡುಗೆಯ ಮೊದಲನೆಯ ಹಂತವನ್ನ ದಾಟಿದೆ.


ಹಂತ#2:

ಆಗ ಸಮಯ ಸುಮಾರು 1:15PM. 2 ಈರುಳ್ಳಿ, ಹಾಗೂ ಶುಚಿಯಾಗಿ ತೊಳೆದ 4 average ಗಾತ್ರದ ಆಲೂಗಡ್ಡೆ, 2 ಟೊಮೆಟೊ, 10 Beans, 1 ಚಾಕೂ, 1 ತರಕಾರಿ ಕುಯ್ಯುವ Plastic ಮಣೆ, ಮತ್ತು 1 Cooker ತಗೊಂಡು ಚಾವಡಿಗೆ ಬಂದೆ. ನಾನು ಈ ಹಿಂದೆಯೇ ತಿಳಿಸಿರುವಂತೆ ನನಗೆ ತರಕಾರಿ ಕುಯ್ಯುವ ಕಾಯಕದಲ್ಲಿ ತನ್ನನು ತಾನು ತೊಡಗಿಸಿಕೊಂಡು ಅಭ್ಯಾಸವಿತ್ತು. ಅದಲ್ಲದೆ ಊರಿನಲ್ಲಿ ನೆರೆಹೊರೆಯವರ ಮನೆಗಳಲ್ಲಿ ಅನುಪತ್ಯಗಳಿದ್ದಾಗ ಅಡುಗೆಗೆ wholesale ತರಕಾರಿ ಹೆಚ್ಚುವ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದೆ. ಈ ಎಲ್ಲಾ ಅನುಭವಗಳು ನನಗೆ ಆ ಸಂದರ್ಭವನ್ನ ಸಮರ್ಥನಾಗಿ ಎದುರಿಸಲು ತುಂಬಾ ಸಹಾಯಕವಾದವು.

ಆಲೂ ಕೊಯ್ಯುವುದು ಅತಿಸುಲಭ. ಗಡ್ಡೆಯನ್ನ ಅರ್ಧ ಭಾಗ ಮಾಡಿ, ಆ ಎರಡೂ ಅರ್ಧ ಭಾಗಗಳನ್ನ ಬೇಕಿದ್ದಷ್ಟು ಅಗಲವಾದ ಹೋಳುಗಳಾಗಿ ತುಂಡು ಮಾಡಿ, Cookerನಲ್ಲಿಟ್ಟೆ. ಟೊಮೆಟೊವನ್ನೂ ಕೂಡಾ ಅದೇ ರೀತಿ, ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳಾಗಿ ಕುಯ್ದೆ. ಗಮನಿಸಿ, ಟೊಮೆಟೊ ಕುಯ್ಯುವಾಗ ಟೊಮೆಟೊ ಮೇಲಿನ ನಮ್ಮ ಹಿಡಿತ ತುಂಬಾ ಮುಖ್ಯ. ನಮ್ಮ ಹಿಡಿತ ಬಿಗಿಯಾಗಿದ್ದಲ್ಲಿ ಟೊಮೆಟೊ ಪಚಕ್ಕೆಂದೀತು, ಜಾಗ್ರತೆ! ಹಿಡಿತ ಸಡಿಲಾಗಿದ್ದರೆ ಫಸಕ್ಕನೆ ಟೊಮೆಟೊ ಜಾರಿ ಹೋಗುವ ಅಪಾಯವೂ ಇದೆ! So, ಟೊಮೆಟೊವನ್ನ ಬೆರಳುಗಳಿಂದ ಇತಿಮಿತಿಹಿತವಾದ ಬಲದೊಂದಿಗೆ ಹಿಡಿದುಕೊಂಡು, ಕಿಂಚತ್ತೂ ಕನಿಕರವಿಲ್ಲದೆ ನಿರ್ದಯವಾಗಿ ಕುಯ್ಯಲು ಕಲ್ಲಿನಂಥಾ ಹೃದಯವೂ ಬೇಕು. ಒಂದು ದಿನ ಸಣ್ಣಕ್ಕ, “ಓ ಪುಟ್ಟಾ, ಅದಕ್ಕೆಂತ ನೋವಾಗೂದಿಲ್ಲ ಎಂದಾಗಲೇ ತರಕಾರಿ ಕುಯ್ಯುವ ಕಾಯಕದಲ್ಲಡಗಿರುವ ಈ ಕಟುಸತ್ಯದ ಅರಿವು ನನಗಾದದ್ದು!

ನನ್ನಿಂದ ಸಾಧ್ಯವಾದಷ್ಟು ನಾರನ್ನು Beansನಿಂದ ಕಿತ್ತು ಕಿತ್ತೆಸೆದೆ. ಆಮೇಲೆ ಅಷ್ಟೂ Beansಗಳನ್ನ ಕೈಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡು ಒಂದೊಂದೇ ಇಂಚು ಉದ್ದದ ತುಂಡುಗಳನ್ನಾಗಿ ಕುಯ್ದೆ.

ಬಳಿಕ, ಈರುಳ್ಳಿಯಿಂದ ಎರಡು ಸಿಪ್ಪೆಗಳನ್ನೂ, ಬುಡ ಮತ್ತು ತುದಿಭಾಗಗಳನ್ನೂ ಸ್ವಲ್ಪ ಕತ್ತರಿಸಿ ಕಿತ್ತೆಸೆದು, ಈರುಳ್ಳಿಯನ್ನ ಸರಿಯಾಗಿ ಇಬ್ಭಾಗ ಮಾಡಿದೆ. ಪ್ರತಿಯೊಂದು ಅರ್ಧ ಹೋಳನ್ನೂ ಕವುಚಿಹಾಕಿ, ಸಾಧ್ಯವಾದಷ್ಟು ಚಿಕ್ಕ ಚಿಕ್ಕ sliceಗಳನ್ನಾಗಿ ಕತ್ತರಿಸಿದೆ. ತರಕಾರಿ ಕುಯ್ದುಳಿದ ಕಸಗಳಿಗೆಲ್ಲ ಹಳೆಯ ಕಾಗದವೊಂದರಲ್ಲಿ ಎತ್ತಿಕೊಂಡ್ಹೋಗಿ ಕಸದ ಬುಟ್ಟಿಯ ಹಾದಿ ತೋರಿಸಿ, ಕಣ್ಣು ತೊಳೆದು ಬಂದೆ. ಗಮನಿಸಿ, ನಾನು ಈರುಳ್ಳಿ ಕುಯ್ಯವುದನ್ನ ಕೊನೆಗಿಟ್ಟುಕೊಂಡಿರುವ ಉದ್ದೇಶ; ತರಕಾರಿ ಕುಯ್ಯುವುದರ ಮಧ್ಯೆ ಕಣ್ಣು ತೊಳೆಯಬೇಕಾದ ಅಡಚಣೆಯನ್ನ ಇಲ್ಲದಾಗಿಸುವುದಾಗಿತ್ತು!

ಕುಯ್ದ ತರಕಾರಿಗಳನ್ನೆಲ್ಲ Cookerಗೆ ಸುರಿದು, ಉಸಿರು ಬಿಗಿಹಿಡಿದು, ತರಕಾರಿ ಮುಳುಗುವಷ್ಟು ನೀರನ್ನೂ Cookerಗೆ ಸುರಿದು, ಮುಚ್ಚಳದಲ್ಲಿ Gasket ಇದೆಯೆನ್ನುವುದನ್ನ ಧೃಡಪಡಿಸಿಕೊಂಡು, Cookerನ ಮೇಲೆ ಮುಚ್ಚಳವನ್ನಿಟ್ಟು ಭದ್ರಪಡಿಸಿ, ಮುಚ್ಚಳದ ಮೇಲೆ Weight ಇಟ್ಟು, ಉರಿಯುತ್ತಿರುವ Gas Stove ಮೇಲೆ ಈ Cookerನ್ನ ಏರಿಸಿ, ಇನ್ನೊಮ್ಮೆ ದೀರ್ಘವಾದ ನಿಟ್ಟುಸಿರು ಬಿಟ್ಟೆ. ಎರಡನೆಯ ಹಂತ ಮುಗಿಯಿತು.


ಹಂತ#3:

ಎರಡೂ Stoveಗಳ ಮೇಲೆ Cookerಗಳನ್ನ ಬಿಟ್ಟು, ಈಗ ಅತ್ಯಂತ ಅಪಾಯಕಾರೀ ಆಟಿಕೆಯೆಂಬ ಕುಖ್ಯಾತಿಯುಳ್ಳ ತುರಿಮಣೆಯನ್ನ ಚಾವಡಿಯಲ್ಲಿಟ್ಟು, ಅದರ ಕೆಳಗೆ ಒಂದು ತಟ್ಟೆಯನ್ನಿಟ್ಟೆ. ಒಂದು ತೆಂಗಿನಕಾಯಿಯನ್ನ ಎಡಗೈಯಲ್ಲಿ ಹಿಡಿದುಕೊಂಡೆ, ಬಲಗೈಯಲ್ಲಿ ಕತ್ತಿ ಹಿಡಿದುಕೊಂಡೆ.

ಅಸಹನೀಯ ಮೌನ, ಅಂಗೈ ಬೆವರುತ್ತಿತ್ತು, ಉಸಿರುಗಟ್ಟಿಸುವಂಥ ಪರಿಸ್ಥಿತಿ ಸೃಷ್ಠಿಯಾಗಿತ್ತು! ಎದೆ ಡಬ್ ಡಬ್, ಡಬ್ ಡಬ್, ಡಬ್ ಡಬ್ ಅಂತ ಬಡ್ಕೋತಿತ್ತು. 1, 2, 3, 4, 5, 6, 7, 8, ಒಂಭತ್ತನೆಯ ಏಟಿಗೆ ಕಾಯಿ ಬಿರುಕುಬಿಟ್ಟಿತು.

ಅಂದ ಹಾಗೆ ಕಾಯಿ ಒಡೆಯುವುದರಲ್ಲಿ  ಅಂದು ನಾನು ಸ್ವಲ್ಪ ದುರ್ಬಲನಾಗಿದ್ದೆ. ಕಾಯಿ ಒಡೆಯೋವಾಗ ನಾಲ್ಕು ವಿಷಯಗಳು ಸದಾ ನನ್ನ ಬೆವರಿಳಿಸುತ್ತವೆ.
1, ಕೈ ತಪ್ಪಿ ಏಟು ನನ್ನ ಕೈ ಮೇಲೆಯೇ ಬಿದ್ದರೆ ಎನ್ನುವ ಭಯ.
2, ಬಲವಾಗಿ ಏಟು ಹೊಡೆದು ಒಡೆಯೋಣವೆಂದರೆ ಎಲ್ಲಿ ಎಳನೀರೆಲ್ಲಾ ಚೆಲ್ಲಿ ವ್ಯರ್ಥವಾಗುವುದೋ ಎನ್ನುವ ಭಯ.
3, ಎಲ್ಲಿ ಕಾಯಿ ಸರಿಯಾಗಿ ಅರ್ಧ ಭಾಗವಾಗದೆ, ಒಂದು ದೊಡ್ಡ ತುಂಡು, ಒಂದು ಸಣ್ಣ ತುಂಡಾಗಿ ಒಡೆಯುವುದೋ ಎನ್ನುವ ಭಯ.
4, ಎಲ್ಲಿ ಗೆರಟೆ ಸೀಳೊಡೆದು, ಮುಂದೆ ಕಾಯಿ ಕೆರೆಯುವಾಗ ಕೈಯನ್ನ ಕಚ್ಚಿ ಹಿಡಿದು ಗಾಯಕ್ಕೆ ಎಡೆಮಾಡಿಬಿಡುವುದೋ ಎನ್ನುವ ಭಯ.
ಕೊನೆಗೂ ಒಮ್ಮೆ ಕಾಯಿ ಒಡೆಯೋ ಸಾಧನೆ ಮಾಡಿ ಮುಗಿಸೋವಷ್ಟರಲ್ಲಿ ಹಣೆಯಿಂದ ಜಾರಿದ ಒಂದು ಬೆವರ ಹನಿ ಹಾಗೇ ಜಾರಿಕೊಂಡು ಕೆನ್ನೆಯ ಮೇಲಿಳಿದು ಮಾಯವಾಯ್ತು. ಹೀಗಾಗಿ ತೆಂಗಿನಕಾಯಿ ಒಡೆಯುವ ಕೆಲಸವು ಒಂದಾನೊಂದು ಕಾಲದಲ್ಲಿ ಪ್ರಾರಂಭಿಕ ಹಂತದಲ್ಲಿ ನನಗೆ ಸಹಜವಾಗಿಯೇ ಪಕ್ಕಾ "ಭಯಂಕರಂ ಭಸ್ಮಾಸುರಂ" ಕಲಸವೇ ಆಗಿತ್ತು.

ಕಾಯಿ ಒಡೆಯೋವಾಗ ನಾನು ನಮ್ಮಮ್ಮ ಹೇಳಿದ ಮಾತುಗಳನ್ನ ನೆನಪಿಸುತ್ತೇನೆ. ಅಮ್ಮ ಹೇಳುತ್ತಿದ್ದರು, ಕಾಯಿಯ ಮೇಲಿರುವ ಮೂರು ಎತ್ತರವಾದ ಚಡಿಗಳಲ್ಲಿ ಯಾವ ಒಂದು ಚಡಿಯು ಉಳಿದ ಇನ್ನೆರಡು ಚಡಿಗಳಿಂದ ಹೆಚ್ಚು ಅಂತರದಲ್ಲಿರುವುದೋ ಆ ನಿರ್ದಿಷ್ಟ ಚಡಿಯನ್ನ ಗುರುತಿಸಿ ಅದರ ಮೇಲೆ ಬಿರುಕು ಬಿಡೋ ತನಕ ಬಲವಾಗಿ ಕತ್ತಿಯೇಟು ಕೊಡು, ಅಬ್ಬಬ್ಬಾ ಎಂದರೂ, 2ರಿಂದ 3 ಏಟಿಗೆ ಕಾಯಿ ಖಂಡಿತಾ ಬಿರುಕು ಬಡಲೇಬೇಕು. ಆದರೆ ಅಮ್ಮ ಹಾಗೆ ಕಾಯಿ ಒಡೆಯುವ ಮಾತ್ರ ಹಲವಾರು ಬಾರಿ ಎಳನೀರು ಚೆಲ್ಲಿಹೋಗುತ್ತಿತ್ತು. ಹಾಗಾಗಿ, ನಾನು ಈ ರೀತಿ ನಾಲ್ಕು ಭಯಗಳ ನಡುವೆ ತಿಕ್ಕಲು ತಿಕ್ಕಲಾಗಿ ಕಾಯಿ ಒಡೆಯುವುದರಿಂದಾಗಿ ಏಟುಗಳ ಸಂಖ್ಯೆ 2-3ರಿಂದ 10ಕ್ಕೇರುತ್ತದೆ, ಕಾರಣ - ಎಳನೀರಿನ ಮೇಲಿರುವ ಮೋಹ! ಅಮ್ಮನ ಸಲಹೆಗಳನ್ನು ನಾನು ಒಂದು ಹಂತದ ತನಕ ಅನುಸರಿಸಿದರೂ ನನ್ನಿಂದ ಎಳನೀರು ಚೆಲ್ಲಿಹೋಗುವುದು ಮಾತ್ರ ಅತಿ ವಿರಳ. ಎಳನೀರು ಒಂದು ಲೋಟದಲ್ಲಿ ಶೇಖರಿಸಿಟ್ಟು ಮನೆಯಲ್ಲಿರುವ ಸಣ್ಣಮಕ್ಕಳಿಗೆ ಕೊಟ್ಟರೆ ಅವರು ತುಂಬಾ ಪ್ರಸನ್ನರಾಗುತ್ತಾರೆ. ಹೀಗೆ ಹೋಳಾದ ಕಾಯಿಯ 2 ತುಂಡುಗಳನ್ನು ನಮ್ಮ ಭಾಷೆಯಲ್ಲಿ 'ಕಾಯಿಯ ಕಡಿ' ಅಥವಾ ‘ಕಾಯಿ-ಕಡಿ’ ಎನ್ನುತ್ತೇವೆ.

ಕಾಯಿ ಕೆರೆಯೋದು ನನಗೆ ತುಂಬಾ ಇಷ್ಟದ ಕೆಲಸ. ಚಿಕ್ಕಂದಿನಿಂದಲೇ ಅಮ್ಮ ಅಥವಾ ಅಡುಗೆಯವರು ವೇಗವಾಗಿ, ಆದರೆ ಅಷ್ಟೇ ನಾಜೂಕಾಗಿ ಕಾಯಿ ತುರಿಯುವ ಆ ಕಲೆಯ ಕೌಶಲ್ಯ ನಾನು ಬೇಕೂ ಹಾಗೆ ಕಣ್ಣು ಬಾಯಿ ಬಿಟ್ಟು, ಬೆಕ್ಕಸಬೆರಗಾಗಿ ನೋಡುತ್ತಿದ್ದೆ. ಪೂರ್ತಿ ಕೆರೆದಾದ ಮೇಲೆ ಕಾಯಿಯ ಗೆರಟೆಯ ಒಳಭಾಗ ಕ್ಷೌರ ಮಾಡಿದಷ್ಟು ಅಚ್ಚುಕಟ್ಟಾಗಿಸುವುದು ಸಂಪೂರ್ಣ ಕೈಚಳಕವೇ ಸರಿ. ಪಕ್ಕದಮನೆ ಮಯ್ಯರ ಮಗ, ಅಡುಗೆಪಟು ಪುಟ್ಟಣ್ಣನ ಅಮೂಲ್ಯ ಸಲಹೆಗಳನ್ನ ನಿಮಗೆ ತಿಳಿಸಲು ಬಯಸುತ್ತೇನೆ, ಮೊದಲಿಗೆ ಕಡಿಯ ಒಳಗಡೆಯಲ್ಲಿ ಮೇಲ್ಭಾಗಗಳನ್ನ ಕೆರೆದು, ಆನಂತರ ಕ್ರಮೇಣ ಕೆಳಭಾಗದ ಕಡೆಗೆ ಹಂತ ಹಂತವಾಗಿ ಕೆರೆಯುತ್ತಾ ಮುಂದುವರೆಯಬೇಕು. ಒಂಥರಾ Tap ONಮಾಡಿಟ್ಟ Drum ಒಳಗಿನಿಂದ ನೀರು ಕ್ರಮೇಣ ಖಾಲಿಯಾದಂತೆ, ಕಾಯಿಯೊಳಗಿನ ಬೊಂಡು (ಬೊಂಡು = ಬಿಳಿ ಬಣ್ಣದ ದಪ್ಪ ಗಂಜಿಯ ತಿರುಳು) ಕೆರೆಯುತ್ತಾ, ಕೆರೆಯುತ್ತಾ ಕ್ರಮಬದ್ಧವಾಗಿ ಕಡಿಯ ಒಳಭಾಗದಲ್ಲಿ ಗೆರಟೆಯ ತನಕವೂ, ಮೇಲ್ಭಾಗದಿಂದ ಕ್ರಮೇಣ ಕಡಿಯಲು ತಳಭಾಗ ಕಡೆಗೂ ಕರೆದು ಖಾಲಿಮಾಡುತ್ತಾ ಸಾಗಬೇಕು. ಕೆರೆದ ಕಾಯತುರಿಗಳೆಲ್ಲಾ ಸುರಕ್ಷಿತವಾಗಿ ತಟ್ಟೆಯಲ್ಲಿ ರಾಶಿಬೀಳುತ್ತಿರಬೇಕು, ಹಾಗೆ ರಾಶಿ ಬೀಳೋದನ್ನ ನೋಡುವುದು ಬಲು ಸೊಗಸು. ತುರಿದ ಕಾಯಿಯನ್ನು ಬೆಕ್ಕು, ಹಾಗೂ ಚಿಕ್ಕ ಮಕ್ಕಳಿಂದ ಜೋಪಾನವಾಗಿಟ್ಟುಕೊಳ್ಳಬೇಕು. 

ಒಂದು ಸಾಂಬಾರಿಗೆ ಎಷ್ಟು ಕಡಿ’ಯ ಕಾಯಿ ಬೆರೆಸಬಹುದೆನ್ನುವ ಅರಿವು ನನಗಿರಲಿಲ್ಲ. ಅಕ್ಕನಲ್ಲಿ, ಒಂದು ಕಡಿ ಪೂರ್ತಿ ಹಾಕುತ್ತೇನೆ, ಆಮೇಲೆ ನಿನ್ನೆಯದ್ದು ಉಳಿದ ಕಡಿಯಲ್ಲಿ ಸುಮಾರು ಅರ್ಧದಷ್ಟು ಬಾಕಿ ಇದೆ, ಅದನ್ನೂ ಕೆರೆದು ಹಾಕ್ಲಾ?” ಎಂದು ಕೇಳಿದೆ. ದ ತಿರುಗಿ ಕೂಡಾ ನೋಡದೆ ಹೂಂ ಅಂದಳು. ಜೈ!” ಎಂದು ಅಷ್ಟೂ ಕಾಯಿಯನ್ನ ಕೆರೆದು ಹಾಕಿದೆ. ಕೆರೆಮಣೆಯ ಬಾಯಿಯ ಮೇಲ್ಮೈ ಮತ್ತದರ ಕೆಳಭಾಗದಲ್ಲಿ ಹಿಡಿದುಕೊಂಡಿರುವ ಕಾಯಿತುರಿಗಳನ್ನ ಒರೆಸಿ ತಟ್ಟೆಗೆ ಹಾಕಿದೆ. ತುರಿಮಣೆಯ ಬಾಯಿಯನ್ನ ಸ್ವಚ್ಛಗೊಳಿಸಿ ತೊಳೆದಿಟ್ಟೆ. ಒಂದು ಕಿವಿಮಾತು, "ಒಂದು ಸಾಂಬಾರಿಗೆ ಒಂದು ಕಡಿಗಿಂತ ಹೆಚ್ಚು ಕಾಯಿ ಹಾಕೋದು ಸೂಕ್ತವಲ್ಲ".

ಈ ಕೆಲಸದ ಮಧ್ಯೆ ಎಚ್ಚರದಿಂದ ಒಂದು ಕಿವಿ Gas Stove ಕಡೆಗೆ ಜಾಗೃತವಾಗಿರುವುದು ಮುಖ್ಯ. ಮೊದಲನೆಯ ಸಿಳ್ಳೆ ಹೊಡೆದುಕೊಂಡ ತಕ್ಷಣ ಎದ್ದು ಹೋಗಿ ನೋಡಿದೆ, ಅನ್ನದ CookerWeightನ ಬದಿಗಳಲ್ಲಿ ನೀರಿನ ಪಸೆಯಿರುವುದನ್ನ ಖಚಿತಪಡಿಸಿಕೊಂಡು ಇನ್ನೆರಡು ಸಿಳ್ಳೆಗಳಿಗಾಗಿ ತಾಳ್ಮೆಯಿಂದ ಕಾದು ಆ Stoveನ್ನ OFF ಮಾಡಿದೆ. ಎರಡನೆಯ Cooker ಅರ್ತನಾದವಿಡುವಾಗಲೂ ಕೂಡಾ ಅದೇ ಥರ ಮಾಡಿದೆ.

ಕಾಯಿತುರಿಯನ್ನ ತಟ್ಟೆಯಿಂದ ತೆಗೆದು ಸಾಧಾರಣ ಗಾತ್ರದ Wet Grinding Jarನಲ್ಲಿ ತುಂಬಿಸಿಟ್ಟೆ. ಉರಿಯುತ್ತಿರುವ ಸಣ್ಣ Stoveನ ಮೇಲೆ ಒಗ್ಗರಣೆ ತಯಾರಿಸುವ ಸೌಟನ್ನಿಟ್ಟೆ. ಸೌಟಲ್ಲಿದ್ದ ನೀರಿನ ಪಸೆ ಪೂರ್ತಿ ಆರಿದ ಮೇಲೆ ಒಂದು ಚಮಚ ಸೂರ್ಯಕಾಂತಿ ಬೀಜದೆಣ್ಣೆ ಸುರಿದೆ. ಅದರ ಮೇಲೆ ಅರ್ಧ ಚಮಚ ಜೀರಿಗೆ ಸುರಿದೆ. ಅದು ಬಿಸಿಯಾಗಿ ಸಿಡಿಯಲು ಶುರುವಾದ ತಕ್ಷಣ ಒಂದೂವರೆ ಚಮಚ ಕೊತ್ತಂಬರಿ ಸುರಿದೆ. ಅದೂ ಕೂಡಾ ಬಿಸಿಯಾಗಿದ್ದು ಮೂಗಿನ ನರಗಳಿಂದ ಮಿದುಳಿನ ಅರಿವಿಗೆ ಬಂದ ಕ್ಷಣದಲ್ಲೇ ಮೂರು ಮೆಣಸು ಸೇರಿಸಿದೆ. ಮೆಣಸು ಕಪ್ಪಾಗುವುದಕ್ಕೂ ಮುನ್ನ ಬೆಂಕಿ ಆರಿಸಿ ಕೈ ತೊಳೆದು, ಕೈಯನ್ನು ಬೈರಾಸದಿಂದ ಒರೆಸಿಕೊಂಡೆ. ಸೌಟಲ್ಲಿರುವ ಕೊತಕೊತನೆ ಕುದಿಯುತ್ತಿರೋ ಪರಿಮಳದ ಎಣ್ಣೆಯ ದ್ರಾವಣವನ್ನ Jarನಲ್ಲಿ ಎರೆದಾಗ ಯಾಕೋ ಒಂಥರಾ ರೋಮಾಂಚಿತನಾದೆ! ಹಾಂ! ನನ್ನ ಒಂದು ಅನುಭವದ ಮಾತು; ಮೈಮರೆತರೆ ಎಣ್ಣೆ ಅಥವಾ ಸೌಟಿನ ಲೋಹಭಾಗ ಕೈಗೆ ಸೋಕಿದರೆ ಅದರ ಬಿಸಿ ನಮ್ಮ ಮೈಗೆ ತಾಕೀತು ಜೋಕೆ!”. ಒಂದು ಚಿಕ್ಕ ಲೋಟದ ತುಂಬ ನೀರು ತೆಗೆದು Jarನಲ್ಲಿ ಸುರಿದೆ. Jarನ್ನು ಜಾಗ್ರತೆಯಾಗಿ Mixyಯ ಮೇಲ್ಭಾಗದಲ್ಲಿ ಭದ್ರಪಡಿಸಿ, Jarನ್ನು ಅದರದ್ದೇ ಆದ ಮುಚ್ಚಳದಿಂದ ಮುಚ್ಚಿಬಿಟ್ಟು, Mixy ON ಮಾಡಿ, Jarನ ಮುಚ್ಚಳ ಬಿಗಿಯಾಗಿ ಹಿಡಿದುಕೊಂಡು Mixy Run ಮಾಡಿದೆ. ಕರ್ಕಶ ಶಬ್ದವನ್ನು ಸುಮಾರು ಒಂದು ನಿಮಿಷ ಸಹಿಸಿಕೊಂಡರೆ ಮಾತ್ರ ಕಾಯಿತುರಿ ಸಮರ್ಪಕವಾಗಿ ರುಬ್ಬಲ್ಪಡುತ್ತದೆ. Jarನ್ನು ತೆಗೆದು ಒಮ್ಮೆ ನೋಡಿ, ಒಂದು ವೇಳೆ ಅದು ಸರಿಯಾಗಿ ರುಬ್ಬಿಕೊಂಡಿಲ್ಲವಾದ್ದರಿಂದಾಗಿ ಕೈಯಿಂದ Jarನೊಳಗಿನ ಮಿಶ್ರಣವನ್ನ ಒಮ್ಮೆ ಕಲಸಿ, ಪುನಃ ಇನ್ನೊಮ್ಮೆ Mixy Run ಮಾಡಬೇಕಾಗಿಬಂತು. ರುಬ್ಬುವ ಘನಕಾರ್ಯ ಮುಗಿಯಿತು, ಅಂದರೆ ಮೂರನೆಯ ಹಂತ ಮಗಿಸಿದೆ.


ಹಂತ#4:

ಇನ್ನು ತರಕಾರಿಯಿರುವ Cookerನ ಹಿಡಿ ಸಡಿಲಗೊಳ್ಳುವ ತನಕ ಒಂದು ಸಣ್ಣ ವಿರಾಮ!! :) :) ಆಗ ಬಂತು ಸಾಂಬಾರು ತಯಾರಿಸುವ ಅಂತಿಮ ಹಂತದ ಆ ನಿರ್ಣಾಯಕ ಕ್ಷಣಗಳು, ಎದೆ ಢವಗುಟ್ಟುತ್ತಿತ್ತು!

Cookerನ ಹಿಡಿ ಸಡಿಲಗೊಂಡರೆ ಅದರರರ್ಥ, Cooker ತನ್ನ ಬೇಯಿಸುವ ಕೆಲಸ ಮುಗಿಸಿದೆ, ಅಂತ. Weight ಕಿತ್ತು, Cookerನ ಮುಚ್ಚಳ ತೆಗೆದು, Jarನಲ್ಲಿರೋ ರುಬ್ಬಿದ ದ್ರಾವಣವನ್ನ Cookerಗೆ ಪೂರ್ತಿ ಸುರಿದೆ. ನೀರಿಗೆ ತತ್ವಾರಯಿರುವವರು ಏನು ಹೇಳ್ತಾರೆ ಅಂದ್ರೆ, “Jarನ್ನು ಕುಡಿಯೋ ನೀರಲ್ಲಿ ತೊಳೆಯಬೇಕು, ತೊಳೆದ ನೀರನ್ನು Cookerಗೆ ಅಂದರೆ ನಿಮ್ಮ ಸಾಂಬಾರಿಗೆ ಸುರಿಯಬೇಕು. ಅರ್ಧ ಚಮಚ ಅರಸಿನಪುಡಿ, ಒಂದು ಚಮಚ ಉಪ್ಪು, ಸಾಂಬಾರು ಜಾಸ್ತಿ ಬೇಕಾಗಿರೋದ್ರಿಂದ ಒಂದು ಲೋಟ ನೀರು ಕೂಡಾ ಸುರಿದೆ. ಒಲೆಯುರಿಸಿ ಹಾಗೆಯೇ 5 ನಿಮಿಷ ಅದನ್ನ ಬೇಯಲು ಬಿಟ್ಟೆ. ಇನ್ನೊಂದು ಒಲೆಯಲ್ಲಿ ಒಗ್ಗರಣೆ ಸೌಟನ್ನಿಟ್ಟು ಅದರಲ್ಲಿ ಒಂದು ಚಮಚ ಸೂರ್ಯಕಾಂತಿ ಬೀಜದ ಎಣ್ಣೆ ಸುರಿದೆ. ಅದು ಸ್ವಲ್ಪ ಬಿಸಿಯಾಗುವಷ್ಟರಲ್ಲಿ ಅದಕ್ಕೆ ಅರ್ಧ ಚಮಚ ಸಾಸಿವೆ ಕಾಳು ಚೆಲ್ಲಿದೆ. ಸಾಸಿವೆ ಸಿಡಿಯಲು ಶುರುವಾಗುವ ಮುನ್ನ ಅರ್ಧ ಚಮಚ ಜೀರಿಗೆ ಮತ್ತು ಮನಬಂದಷ್ಟು ಕರಿಬೇವಿನ ಸೊಪ್ಪು ಸುರಿದೆ. ಸೌಟಲ್ಲಿರುವ ದ್ರಾವಣ ಸಿಡಿಯಲು ಶುರುವಾದಾಗ ಇನ್ನೊಂದು ಕೈಯಿಂದ Stoveನ್ನ OFF ಮಾಡಿ, ಪಕ್ಕದ Stoveನಲ್ಲಿದ್ದ ದ್ರಾವಣ ಸಂಪೂರ್ಣ ಕುದಿದ ನಂತರ, ಆ Cookerಗೆ ಈ ತೈಲ ದ್ರಾವಣವನ್ನು ಸುರಿದಾಗ ಉಂಟಾದ ಕುದಿಯುತ್ತಿರುವ ದ್ರಾವಣಗಳೆರಡರ ಹೊಸ ಮಿಶ್ರಣವೇ ನನ್ನ ಚೊಚ್ಚಲ ಸಾಂಬಾರಾಗಿತ್ತು! ಉಪ್ಪು ಸಾಕಾದಷ್ಟು ಹಾಕಿದೆಯೋ ಇಲ್ಲವೋ ಅನ್ನೋದನ್ನ ಪರೀಕ್ಷಿಸಲು style ಆಗಿ ಒಂದು ಸೌಟಿನಿಂದ ಒಂದೆರಡು ಹನಿ ಸಾಂಬಾರನ್ನ ಅಂಗೈಗೆ ಹಾಕಿ, ರುಚಿ ನೋಡಿದೆ. ನನ್ನ ಸಾಂಬಾರಿನೆಡೆಗೆ ಹೀಗೂ ಉಂಟೇ ಎಂದು ನಿರ್ಲಿಪ್ತ ನೋಟ ಬೀರಿದೆ. ಇತೀ ಚತುರ್ಥಾಧ್ಯಾಯಃ।

ಸಮಯ ಮಧ್ಯಾಹ್ನ 2 ಗಂಟೆ ಆಗಿತ್ತು. ಊಟ ಮಾಡಿದೆ. ಸಾಂಬಾರು ತಿನ್ನುವ ಹಾಗಿತ್ತು, ತಿಂದೆ. ರುಚಿ ಗಮನಿಸಲು ಸಾಧ್ಯವಿಲ್ಲದಷ್ಟು ಕೆಟ್ಟ ಹಸಿವು ಕಾಡುತ್ತಿತ್ತು. ದೊಡ್ಡಕ್ಕ ಸಾಂಬಾರು ಪರ್ವಾಗಿಲ್ವೋ ಅಂದಳು. ಸಂಜೆ Dietingನಲ್ಲಿದ್ದ ಸಣ್ಣಕ್ಕ ಬರುತ್ತಿದ್ದಂತೇ ಅಬ್ಬಾ, ಹಸಿವೂ ಅಂದವರೇ ಅಡುಗೆಮನೆಯಿಂದ ಒಂದು ಬಟ್ಟಲಲ್ಲಿ ಸ್ವಲ್ಪ ಅನ್ನ ಸಾಂಬಾರು ಹಾಕಿಕೊಂಡು ಬಂದು ಊಟಮಾಡತೊಡಗಿದರು. ಸಾಂಬಾರಿನ ಜೊತೆ ಮೊದಲ ತುತ್ತು ಅನ್ನ ತಿನ್ನುವಾಗ ಅವರ ಮೊದಲ ಪ್ರತಿಕ್ರಿಯೆಯೇನಿರಬಹುದೆಂದು ಕುತೂಹಲದಿಂದ ಕಾದೆ. ಏನೂ ವ್ಯತ್ಯಾಸವಿಲ್ಲದೆ ಮಾಮೂಲಾಗಿ ಊಟ ಮಾಡುತ್ತಿದ್ದದ್ದು ನೋಡಿ ಬೇಸರವಾದಾಗ ಕೇಳಿದೆ, ಸಾಂಬಾರು ಹೇಗಿದೆ?”. ರುಚಿಯ ಬಗ್ಗೆ ಮುಖದಲ್ಲಿ ಸ್ವಲ್ಪ ಸಂಶಯ ವ್ಯಕ್ತಪಡಿಸುತ್ತಾ, ಸರಿಯಾಗಿಯೇ ಇದೆಯಲ್ಲಾ, ಯಾಕೆ?” ಎಂದರು. ಅದು ಅಂತಿಂಥ ಸಾಂಬಾರಲ್ಲ, ಪ್ರಸಾದನ ಜೀವಮಾನದ ಮೊದಲನೆಯ ಸಾಂಬಾರು. ಹೌದಾ..!?” ಅಂದವರೇ ತಕ್ಷಣ ಇನ್ನೂಂದು ತುತ್ತು ಅನ್ನ ತಿಂದು ನಿಜವಾಗ್ಲೂ ತುಂಬ ಚೆನ್ನಾಗಿದೆ, ಹೇಗೆ ಮಾಡಿದ್ರಿ?” ಅನ್ನೋವಾಗ ಹಿಹ್ಹಿಹ್ಹೀ ಎಂದು ಪೆಚ್ಚಾಗಿ ಹಲ್ಕಿರಿದೆ. ಒಳಗೊಳಗಿನಿಂದಲೇ ಅನ್ಕೊಂಡೆ, ಇವರು ನನ್ನ ಮೊದಲನೆ ಸಾಂಬಾರಿನ ರಾಜಾರೋಷ ಸಂಭ್ರಮಕ್ಕೆ ನೀರೆರೆಯಬಾರದೆನ್ನುವ ಕಾರಣದಿಂದ, (ಕಾಯಿ ಹಾಕಿದ್ದು ಜಾಸ್ತಿಯಾಗಿದ್ದರೂ) ನಿಜವಾಗ್ಲೂ ತುಂಬ ಚೆನ್ನಾಗಿದೆ’ ಎಂದು ಸುಮ್ನೇ ನನ್ನ ಸಮಾಧಾನಕ್ಕೆ ಸಂದರ್ಭಕ್ಕೆ ತಕ್ಕ ಸಿಹಿಯಾದ ಸುಳ್ಳು ಹೇಳ್ತಿದ್ದಾರೆ.

ರಸಾಯನಶಾಸ್ತ್ರದ ಪ್ರಯೋಗದ ಥರಹ ಕಲ್ಪಿಸಿಕೊಂಡು  ಅಡುಗೆ ಕಲಿಯಲು ಶುರುಮಾಡಿದ ನಾನು ಪಾಕಶಾಸ್ತ್ರದಲ್ಲಿ, ಅಂದಿನಿಂದ ಇಂದಿನವರೆಗೂ ಬೆಚ್ಚಿಬೀಳಿಸುವಂಥಹ ಅದ್ವಿತೀಯ ಪ್ರಯೋಗಗಳನ್ನ ಮಾಡುತ್ತಲೇ ಇದ್ದೇನೆ. ಖಾರ ಜಾಸ್ತಿಯಾದರೆ ಸಾಂಬಾರಿಗಿಷ್ಟು ಸಕ್ಕರೆ ಹಾಕಿ ಸಣ್ಣಕ್ಕನಿಂದ ಬೈಸಿಕೊಂಡು (ಅಡುಗೆಯ ವಿಚಾರವಾಗಿ ಸಕ್ಕರೆ ಬೆಲ್ಲಗಳಿಗಿರುವ ವ್ಯತ್ಯಾಸದ ಪಾಠ ಕಲಿತ)  ಉದಾಹರಣೆಯೊಂದೇ ಸಾಕು ನನ್ನ ಈ ತೀವ್ರತರ ಪ್ರಯೋಗಗಳ ಬಗ್ಗೆ ನಿಮಗೆ ಅರಿವು ಮೂಡಲು.

ಪ್ರಸಕ್ತ ನಾನು ಪಾಕಕ್ರಾಂತಿಯೆಬ್ಬಿಸುವ ಒಂದು ಹೊಸ ಆಲೋಚನೆಯಲ್ಲಿದ್ದೇನೆ. ಅದೇನೆಂದರೆ, ನಮ್ಮ ದೂರದ ಸಂಬಂಧಿ, ಇನ್ನೊಬ್ಬರು ಅಕ್ಕನ ಅಡುಗೆ Blog ಓದಿ, ಅಡುಗೆ ಮಾಡಿ ಕಲಿಅಂತ ದೊಡ್ಡಕ್ಕ ಹೇಳಿದ್ಳು. ಒಂದು ವೇಳೆ ನನ್ನ ಈ Blog ತುಂಬಾ ಜನಮನ್ನಣೆಗೆ ಪಾತ್ರವಾದರೆ, ಆ ದೂರಸಂಬಂಧೀ ಅಕ್ಕನ Blogಗೆ ಪೈಪೋಟಿಯಲ್ಲಿ 'ಪುಟ್ಟನ ಪಾಕ-ಪ್ರಸಂಗಗಳು’ ಎಂಬ ಹೊಸ Blog ಶುರು ಮಾಡಬೇಕೆಂದಿದ್ದೇನೆ. ಮುಂದೊಂದು ದಿನ ಜನ ಮುಗಿಬಿದ್ದು ಪುಟ್ಟನ ಈ Blogಗಳನ್ನ ಓದುತ್ತಿರುವಾಗ, ನನ್ನ ದೊಡ್ಡಕ್ಕ ಆ ದೂರಸಂಬಂಧೀ ಅಕ್ಕನಲ್ಲಿ ನೋಡೇ, ನನ್ನ ತಮ್ಮನ Blog ನೋಡಿ ಅಡುಗೆ ಕಲಿ ಎನ್ನುವಂಥ ದಿನವೊಂದೇ ನನ್ನ ಪುಟ್ಟ ಕನಸು.

ಕೊನೆಯದಾಗಿ Blogನಲ್ಲಿ ಪ್ರಸ್ತಾಪಗೊಂಡಂತಹ ಎಲ್ಲಾ ವ್ಯಕ್ತಿಗಳಲ್ಲೂ ನನ್ನದೊಂದು ಸವಿನಯ ಬಿನ್ನಹ; Blogನಲ್ಲಿ ಉಲ್ಲೇಖಗೊಂಡಿರುವ ಯಾವುದೇ ವಿಚಾರಗಳು ನಿಮ್ಮ ಮನ ನೋಯಿಸುವ ಉದ್ದೇಶದಿಂದ ಬರೆದಿದ್ದಲ್ಲ. ಅನುಮತಿಯಿಲ್ಲದೆ ನಿಮ್ಮ ನೈಜ ಪಾತ್ರವನ್ನು ನನ್ನ Blogನಲ್ಲಿ ಬಳಸಿದ್ದರಿಂದ ನೋವಾಗಿದ್ದರೆ ನನಗೆ ಕ್ಷಮೆಯಿರಲಿ”. ಹಾಗೆಯೇ ಕೊನೆಯಲ್ಲಿನ್ನೊಂದು ಕಗ್ಗವಿದೆ, ಕೇಳಿರಿ:

ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ |
ನಿನ್ನ ದುಡಿತದ ಬೆವರೊ, ಪರರ ಕಣ್ಣೀರೋ? ||
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ |
ಜೀರ್ಣಿಸದ ಋಣಶೇಷ - ಮಂಕುತಿಮ್ಮ ||

ಭಾವಾರ್ಥ: ಉಣ್ಣುವಾಗ ಒಂದು ಪ್ರಶ್ನೆ ಹಾಕಿಕೊ. ಅನ್ನ ಬೇಯಿಸಿದ ನೀರು ನಿನ್ನ ದುಡಿತದ ಬೆವರಾಗಿದೆಯೋ ಇಲ್ಲಾ ಅನ್ಯರ ಕಣ್ಣೀರೋ? ಜಗಕೆ ಉಣ್ಣಲು ನೀಡಿದಷ್ಟು ನೀನು ಉಣ್ಣು, ಉಳಿದದ್ದು ಜೀರ್ಣವಾಗದ ಋಣಶೇಷ ಅಷ್ಟೆ.