Friday, July 24, 2009

"ಉದರನಿಮಿತ್ತಂ"

ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |

ಧೃಷ್ಟಧಣಿಯೂಳಿಗಕೆ ಸೊಟ್ಟು ಮೈಬಾಗು ||

ಹಿಟ್ಟಿಗಗಲಿದ ಬಾಯಿ, ಬಟ್ಟೆಗೊಡ್ಡಿದ ಕೈಯಿ |

ಇಷ್ಟೇ ನಮ್ಮೆಲ್ಲ ಕಥೆ ಮಂಕುತಿಮ್ಮ ||

ಭಾವಾರ್ಥ: ನಮ್ಮ ಬಾಳಲ್ಲಿ ಹೊಟ್ಟೆರಾಜನದು ನಿತ್ಯದ ಅಟ್ಟಹಾಸ. ಅದಕ್ಕಾಗಿ ಹಸಿವು ಹಿಂಗಿಸಲು ಕಡುಕ್ರೂರಿ ಒಡೆಯನಲ್ಲಿ ಮೈಬಾಗಿ ಸೇವೆ. ನಮ್ಮ ಕತೆಯ ಸಾರಾಂಶವೆಂದರೆ ತುತ್ತಿಗಾಗಿ ಬಾಯಿ, ಬಟ್ಟೆಗಾಗಿ ಚಾಚಿದ ಕೈಯಿ.

ಆ ದಿನ ನನ್ನ ಕಣ್ಣುಗಳನ್ನ ನಾನೇ ನಂಬಲಾರದಂಥ ಪರಿಸ್ಥಿತಿ ಅಥವಾ, ನನ್ನ ನಾಲಿಗೆಯನ್ನ ನಾನು ಸಂಶಯದಿಂದ ಕಾಣಬೇಕಿರುವ ಪರಿಸ್ಥಿತಿ ಬರಲಿದೆಯೆಂಬ ಒಂದು ಸಣ್ಣ ಸುಳಿವು ಕೂಡಾ ನನಗಿರಲಿಲ್ಲ. ಆದಿನ ಮಧ್ಯಾಹ್ನದ ತನಕ ಅದೊಂದು ಬರಿಯ ಮಾಮೂಲಿ ಆದಿತ್ಯವಾರ ಆಗಿತ್ತಷ್ಟೇ. ನನಗೆ ಅಂದು Class ಇರಲಿಲ್ಲ, ದೊಡ್ಡಕ್ಕನಿಗೆ ಅಂದು Duty ಕೂಡಾ ಇರಲಿಲ್ಲ. ವಿಮಲಾಕ್ಷಿಗೆ Duty ಇತ್ತು. ಬಿಸಿಲು ನೆತ್ತಿಗೇರಿ, ಗಂಟೆ ಒಂದಾಗುವ ತನಕ ಸುಮ್ಮನೆ ಕುಳಿತಿದ್ದೆ, ಆಮೇಲೆ ಸುಮ್ಮನಿರಲು ಸಾಧ್ಯವಾಗೀತೇ? ಹೊಟ್ಟೆ ತಾಳ ತಾರಕಕ್ಕೇರತೊಡಗಿತ್ತು. ಅಂದಿನ ತನಕ ಅಕ್ಕಂದಿರು ಅಡುಗೆ ಮಾಡಿ ಹಾಕುತ್ತಿದ್ದರೆ, ತರಕಾರಿ ಹೆಚ್ಚಿ ಕೊಡುವುದು ಇತ್ಯಾದಿ ಬಾಲಂಗೋಚಿ ಕೆಲಸಗಳಿಗೆ ನಾನು ಸೀಮಿತನಾಗಿದ್ದೆ. ಪಾತ್ರೆಗಳೆಲ್ಲ ತೊಳೆದಿಟ್ಟು, ಸೊಂಟದ ಮೇಲೆ ಕೈ ಇಟ್ಕೊಂಡು, style ಆಗಿ ಮೆಲ್ಲನೆ ಅಕ್ಕನ ಹತ್ತಿರ ಬಂದು, ಅಡುಗೆ ಏನು ಮಾಡೋಣ?” ಎಂದು ಕೇಳಿದೆ.

ಈ ಸಂದರ್ಭಕ್ಕೆ ಸರಿಹೊಂದುವ ಕಗ್ಗವೊಂದಿದೆ ಓದಿ;

ಹೇಳಲಾಗದ ಹಸಿವು, ತಾಳಲಾಗದ ತಪನೆ |

ಆಳದಲಿ ನಾಚನಾಗಿಪ ಚಿಂತೆಯೂಟೆ ||

ಗಾಳಿಯೆತ್ತೆತ್ತಣಿನೊ ತಂದೀವ ಸೋಂಕು ಇವೆ |

ಬಾಳ ಸಾಮಗ್ರಿಯಲ ಮಂಕುತಿಮ್ಮ ||

ಭಾವಾರ್ಥ: ಹೇಳಲಾಗದಷ್ಟು ಹಸಿವು, ತಾಳಲಾಗದಷ್ಟು ಬೇಗೆ, ಒಳಗೆ ನಾಚಿಕೆಯಾಗುವಷ್ಟು ಚಿಂತೆಯ ಚಲುಮೆ. ಗಾಳಿ ಎಲ್ಲಿಂದಲೋ ತರುವ ಸೋಂಕು ಬೇರೆ. ಇವೇ ಬದುಕಿನ ಸಾಮಗ್ರಿಗಳಾಗಿವೆ.

Bloggingನಲ್ಲಿ ಮುಳುಗಿದವಳಿಗೆ ಯಾರು ಏನು ಕೇಳಿದ್ರೂಂತ ಗೊತ್ತಾಯ್ತೋ ಇಲ್ಲವೋ ಗೊತ್ತಿಲ್ಲ, ಅಕ್ಕ ಏನಾದ್ರೂ ಸರಿ, ಒಂದು ಅಡುಗೆ ಮಾಡಿ ಹಾಕು ಅಂದೇ ಬಿಡಬೇಕೇ! ಒಂದು ಕ್ಷಣಕ್ಕೆ ಬುದ್ಧಿ ಮಂಕಾದಂತಾಯಿತು. ಆದರೆ ಕ್ಷಣಕ್ಕೆ ಸೋಲೊಪ್ಪಲಿಲ್ಲ, ತಕ್ಷಣ ನನ್ನೊಳಗಿನ ಕ್ರಾಂತಿಕಾರಿ ಮನಸ್ಥೈರ್ಯ ಎಚ್ಚರಗೊಂಡಿತು. ಹಸಿವಿನಲ್ಲಿ ಕಣ್ಣು ಕಾಣಿಸುತ್ತಿರಲಿಲ್ಲ, ಏನಾದರೂ ಸರಿ, ಇಂದು ಅಡುಗೆ ಮಾಡಿಯೇ ತೀರಬೇಕೆಂದು ನಿರ್ಧರಿಸಿ ಇದನ್ನೊಂದು ಪಂಥಾಹ್ವಾನದಂತೆ ಸ್ವೀಕರಿಸಿದೆ. ಆಮೇಲೆ ನಡೆದದ್ದು ಇತಿಹಾಸ! ಮಿತ್ರರೇ, ನನ್ನ ಜೀವನದಲ್ಲಿ ಮೊದಲ ಬಾರಿ ಸಾಂಬಾರು ಮಾಡಿದ, ನನ್ನಂತಹ ಅಡುಗೆ ಮಾಡಲರಿಯದ ಬಡಪಾಯೀ Bachelor ಹುಡುಗರಿಗೆ ಸ್ಫೂರ್ತಿಯಾಗಬಹುದಾದ, ಮೈ ನವಿರೇಳಿಸುವ ರೋಚಕ ಸನ್ನಿವೇಶವನ್ನ ನಿಮ್ಮ ಮುಂದಿಡಲಿದ್ದೇನೆ, ಓದಿ.. ಈ ನನ್ನ ಸಾಂಬಾರು ನಾಲ್ಕು ಸುದೀರ್ಘ ಹಂತಗಳಲ್ಲಿ ಮಾಡಿದ ಕರ್ಮಸಾಧನೆ.

ದೀರ್ಘವಾಗಿ ಒಮ್ಮೆ ಉಸಿರೆಳೆದುಕೊಂಡು, ಎರಡೂವರೆ ಲೋಟ ಅಕ್ಕಿ Cookerನಲ್ಲಿ ಹಾಕಿ, ಅಕ್ಕಿಯನ್ನ ಎರಡು ಬಾರಿ ಚೆನ್ನಾಗಿ ನಲ್ಲಿ ನೀರಿನಲ್ಲಿ ತಿಕ್ಕಿ ತೊಳೆದು, ಉಸಿರು ಬಿಗಿಹಿಡಿದು, (ಸರಿಯಾಗಿ ಎಣಿಸಿ) 5 ಲೋಟ ಕುಡಿಯುವ ನೀರು ಹಾಕಿ, ಮುಚ್ಚಳದಲ್ಲಿ Gasket ಇದೆಯೆನ್ನುವುದನ್ನ ಧೃಡಪಡಿಸಿಕೊಂಡು, Cookerಗೆ ಆ ಮುಚ್ಚಳವನ್ನು ಹಾಕಿ, ಮುಚ್ಚಳದ ಮೇಲೆ Weight ಇಟ್ಟು, ಉರಿಯುತ್ತಿರುವ Gas Stove ಮೇಲೆ ಈ Cookerನ್ನ ಏರಿಸಿ, ದೀರ್ಘವಾಗಿ ಉಸಿರು ಬಿಟ್ಟೆ. ಅಂತೂ ನಿರಾತಂಕವಾಗಿ ಅಡುಗೆಯ ಮೊದಲನೆಯ ಹಂತವನ್ನ ದಾಟಿದೆ.

ಆಗ ಸಮಯ ಸುಮಾರು 1:15PM. 2 ಈರುಳ್ಳಿ, ಹಾಗೂ ಶುಚಿಯಾಗಿ ತೊಳೆದ 4 average ಗಾತ್ರದ ಆಲೂಗಡ್ಡೆ, 2 ಟೊಮೆಟೊ, 10 Beans, 1 ಚಾಕೂ, 1 (Plasticನದ್ದು) ತರಕಾರಿ ಕುಯ್ಯುವ ಮಣೆ, ಮತ್ತು 1 Cooker ತಗೊಂಡು ಚಾವಡಿಗೆ ಬಂದೆ. ನಾನು ಈಹಿಂದೆಯೇ ತಿಳಿಸಿರುವಂತೆ ನನಗೆ ತರಕಾರಿ ಕುಯ್ಯುವ ಕಾಯಕದಲ್ಲಿ ಈಹಿಂದೆ ತನ್ನನು ತಾನು ತೊಡಗಿಸಿಕೊಂಡು ಅಭ್ಯಾಸವಿತ್ತು, ಅದಲ್ಲದೆ ಊರಿನಲ್ಲಿ ನೆರೆಹೊರೆಯವರ ಮನೆಗಳಲ್ಲಿ ಅನುಪತ್ಯಗಳಿದ್ದಾಗ ಅಡುಗೆಗೆ wholesale ತರಕಾರಿ ಹೆಚ್ಚುವ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದೆ. ಈ ಎಲ್ಲಾ ಅನುಭವಗಳು ನನಗೆ ಆ ಸಂದರ್ಭವನ್ನ ಸಮರ್ಥನಾಗಿ ಎದುರಿಸಲು ತುಂಬಾ ಸಹಾಯಕವಾದವು.

ಆಲೂ ಕೊಯ್ಯುವುದು ಅತಿಸುಲಭ. ಗಡ್ಡೆಯನ್ನ ಅರ್ಧ ಭಾಗ ಮಾಡಿ, ಆ ಎರಡೂ ಅರ್ಧ ಭಾಗಗಳನ್ನ ಬೇಕಿದ್ದಷ್ಟು ಅಗಲವಾದ ಹೋಳಾಗಿ ತುಂಡು ಮಾಡಿ, Cookerಗೆ ಹಾಕಿದೆ. ಟೊಮೆಟೊವನ್ನೂ ಅದೇ ರೀತಿ, ಆದರೆ ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳಾಗಿ ಕುಯ್ದೆ. ಗಮನಿಸಿ, ಟೊಮೆಟೊ ಕುಯ್ಯುವಾಗ ಟೊಮೆಟೊ ಮೇಲಿನ ನಮ್ಮ ಹಿಡಿತ ತುಂಬಾ ಮುಖ್ಯ. ನಮ್ಮ ಹಿಡಿತ ಬಿಗಿಯಾಗಿದ್ದಲ್ಲಿ ಟೊಮೆಟೊ ಪಚಕ್ಕೆಂದೀತು, ಜಾಗ್ರತೆ! ಹಿಡಿತ ಸಡಿಲಾಗಿದ್ದರೆ ಫಸಕ್ಕನೆ ಟೊಮೆಟೊ ಜಾರಿ ಹೋಗುವ ಅಪಾಯವೂ ಇದೆ! So, ಟೊಮೆಟೊವನ್ನ gentle ಆಗಿ ಹಿಡಿದುಕೊಂಡು, ಕಿಂಚತ್ತೂ ಕನಿಕರವಿಲ್ಲದೆ ನಿರ್ದಯವಾಗಿ ಕುಯ್ಯಲು ಕಲ್ಲಿನಂಥಾ ಹೃದಯವೂ ಬೇಕು. ಒಂದು ದಿನ ವಿಮಲಾಕ್ಷಿ, ಅದಕ್ಕೆ ನೋವಾಗೂದಿಲ್ಲ ಎಂದಾಗಲೇ ತರಕಾರಿ ಕುಯ್ಯುವ ಕಾಯಕದಲ್ಲಡಗಿರುವ ಈ ಕಟುಸತ್ಯದ ಅರಿವು ನನಗಾದದ್ದು!

ನನ್ನಿಂದ ಸಾಧ್ಯವಾದಷ್ಟು ನಾರನ್ನು Beansನಿಂದ ಕಿತ್ತು ಕಿತ್ತೆಸೆದೆ. ಆಮೇಲೆ ಅಷ್ಟೂ Beansಗಳನ್ನ ಕೈಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡು ಒಂದೊಂದೇ ಇಂಚು ಉದ್ದದ ತುಂಡುಗಳನ್ನಾಗಿ ಕುಯ್ದೆ. ಗಮನಿಸಿ, ನಾನು ಈರುಳ್ಳಿ ಕುಯ್ಯವುದನ್ನ ಕೊನೆಗಿಟ್ಟುಕೊಂಡಿರುವ ಉದ್ದೇಶ; ತರಕಾರಿ ಕುಯ್ಯುವುದರ ಮಧ್ಯೆ ಕಣ್ಣು ತೊಯಬೇಕಾದ ಅಡಚಣೆಯನ್ನ ಇಲ್ಲದಾಗಿಸುವುದು. ಈರುಳ್ಳಿಯಿಂದ ಎರಡು ಸಿಪ್ಪೆಗಳನ್ನೂ, ಬುಡ ಮತ್ತು ತುದಿಭಾಗಗಳನ್ನೂ ಸ್ವಲ್ಪ ಕತ್ತರಿಸಿ ಕಿತ್ತೆಸೆದು, ಈರುಳ್ಳಿಯನ್ನ ಸರಿಯಾಗಿ ಇಬ್ಭಾಗ ಮಾಡಿದೆ. ಪ್ರತಿಯೊಂದು ಅರ್ಧ ಹೋಳನ್ನೂ ಕವುಚಿಹಾಕಿ, ಸಾಧ್ಯವಾದಷ್ಟು ಚಿಕ್ಕ ಚಿಕ್ಕ sliceಗಳನ್ನಾಗಿ ಕತ್ತರಿಸಿದೆ. ತರಕಾರಿ ಕುಯ್ದುಳಿದ ಕಸಗಳಿಗೆಲ್ಲ ಹಳೆಯ paperವೊಂದರಲ್ಲಿ ಎತ್ತಿಕೊಂಡ್ಹೋಗಿ ಕಸದ ಬುಟ್ಟಿಯ ಹಾದಿ ತೋರಿಸಿ, ಕುಯ್ದ ತರಕಾರಿಗಳನ್ನೆಲ್ಲ Cookerನಲ್ಲಿ ಹಾಕಿ, ಉಸಿರು ಬಿಗಿಹಿಡಿದು, ತರಕಾರಿ ಮುಳುಗುವಷ್ಟು ನೀರನ್ನೂ Cookerಗೆ ಸುರಿದು, ಮುಚ್ಚಳದಲ್ಲಿ Gasket ಇದೆಯೆನ್ನುವುದನ್ನ ಧೃಡಪಡಿಸಿಕೊಂಡು, Cookerಗೆ ಆ ಮುಚ್ಚಳವನ್ನು ಹಾಕಿ, ಮುಚ್ಚಳದ ಮೇಲೆ Weight ಇಟ್ಟು, ಉರಿಯುತ್ತಿರುವ Gas Stove ಮೇಲೆ ಈ Cookerನ್ನ ಏರಿಸಿ, ಇನ್ನೊಮ್ಮೆ ದೀರ್ಘವಾದ ನಿಟ್ಟುಸಿರು ಬಿಟ್ಟೆ. ಎರಡನೆಯ ಹಂತ ಮುಗಿಯಿತು. ಕಣ್ಣು ತೊಳೆದುಕೊಂಡೆ.

ಎರಡೂ Stoveಗಳ ಮೇಲೆ Cookerಗಳನ್ನ ಬಿಟ್ಟು, ಈಗ ಅತ್ಯಂತ ಅಪಾಯಕಾರೀ ಆಟಿಕೆಯೆಂಬ ಕುಖ್ಯಾತಿಯುಳ್ಳ ತುರಿಮಣೆಯನ್ನ ಚಾವಡಿಯಲ್ಲಿಟ್ಟು, ಅದರ ಕೆಳಗೆ ಒಂದು ತಟ್ಟೆಯನ್ನಿಟ್ಟೆ. ಒಂದು ತೆಂಗಿನಕಾಯಿಯನ್ನ ಎಡಗೈಯಲ್ಲಿ ಹಿಡಿದುಕೊಂಡೆ, ಬಲಗೈಯಲ್ಲಿ ಕತ್ತಿ ಹಿಡಿದುಕೊಂಡೆ.

ಅಸಹನೀಯ ಮೌನ, ಅಂಗೈ ಬೆವರುತ್ತಿತ್ತು, ಉಸಿರುಗಟ್ಟಿಸುವಂಥ ಪರಿಸ್ಥಿತಿ ಸೃಷ್ಠಿಯಾಗಿತ್ತು! 1, 2, 3, 4, 5, 6, 7, 8, ಒಂಭತ್ತನೆಯ ಏಟಿಗೆ ಕಾಯಿ ಬಿರುಕುಬಿಟ್ಟಿತು. ಅಂದ ಹಾಗೆ ಕಾಯಿ ಒಡೆಯುವುದರಲ್ಲಿ ನಾನು ಸ್ವಲ್ಪ ದುರ್ಬಲ. ಕಾಯಿ ಒಡೆಯೋವಾಗ ನಾಲ್ಕು ವಿಷಯಗಳು ಸದಾ ನನ್ನ ಬೆವರಿಳಿಸುತ್ತವೆ. ಒಂದು, ಕೈ ತಪ್ಪಿ ಏಟು ನನ್ನ ಕೈ ಮೇಲೆಯೇ ಬಿದ್ದರೆ ಎನ್ನುವ ಭಯ. ಎರಡು, ಬಲವಾಗಿ ಏಟು ಹೊಡೆದು ಒಡೆಯೋಣವೆಂದರೆ ಎಲ್ಲಿ ಎಳನೀರೆಲ್ಲಾ ಚೆಲ್ಲಿ waste ಆಗುತ್ತೋ ಎನ್ನುವ ಭಯ. ಮೂರು, ಎಲ್ಲಿ ಕಾಯಿ ಸರಿಯಾಗಿ ಅರ್ಧ ಭಾಗವಾಗದೆ, ಒಂದು ದೊಡ್ಡ ತುಂಡು, ಒಂದು ಸಣ್ಣ ತುಂಡಾಗಿ ಒಡೆಯುವುದೋ ಎನ್ನುವ ಭಯ. ನಾಲ್ಕು, ಎಲ್ಲಿ ಗೆರಟೆ ಸೀಳೊಡೆದು, ಮುಂದೆ ಕಾಯಿ ಕೆರೆಯುವಾಗ ಕೈಯನ್ನ ಕಚ್ಚಿ ಹಿಡಿದು ಗಾಯಕ್ಕೆ ಎಡೆಮಾಡಿಬಿಡುವುದೋ ಎನ್ನುವ ಭಯ. ಕೊನೆಗೂ ಒಮ್ಮೆ ಕಾಯಿ ಒಡೆಯೋ ಸಾಧನೆ ಮಾಡಿ ಮುಗಿಸೋವಷ್ಟರಲ್ಲಿ ಹಣೆಯಿಂದ ಜಾರಿದ ಒಂದು ಬೆವರ ಹನಿ ಹಾಗೇ ಜಾರಿಕೊಂಡು ಕೆನ್ನೆಯ ಮೇಲಿಳಿದು ಮಾಯವಾಯ್ತು.

ಕಾಯಿ ಒಡೆಯೋವಾಗ ನಾನು ನಮ್ಮಮ್ಮ ಹೇಳಿದ ಮಾತುಗಳನ್ನ ನೆನಪಿಸುತ್ತೇನೆ. ಅಮ್ಮ ಹೇಳುತ್ತಿದ್ದರು, ಕಾಯಿಯ ಮೇಲಿರುವ ಮೂರು ಎತ್ತರವಾದ ಚಡಿಗಳಲ್ಲಿ ಯಾವ ಒಂದು ಚಡಿಯು ಉಳಿದ ಇನ್ನೆರಡು ಚಡಿಗಳಿಂದ ಹೆಚ್ಚು ಅಂತರದಲ್ಲಿರುವುದೋ ಆ ನಿರ್ದಿಷ್ಟ ಚಡಿಯನ್ನ ಗುರುತಿಸಿ ಅದರ ಮೇಲೆ ಬಿರುಕು ಬಿಡೋ ತನಕ ಬಲವಾಗಿ ಕತ್ತಿಯೇಟು ಕೊಡು, ಅಬ್ಬಬ್ಬಾ ಎಂದರೂ, 2ರಿಂದ 3 ಏಟಿಗೆ ಕಾಯಿ ಖಂಡಿತಾ ಬಿರುಕು ಬಡಲೇಬೇಕು. ಅಮ್ಮ ಹಾಗೆ ಕಾಯಿ ಒಡೆಯುವಾಗ ಹಲವು ಬಾರಿ ಎಳನೀರು ಚೆಲ್ಲಿಹೋಗುತ್ತಿತ್ತು. ನಾನು ಈ ರೀತಿ ನಾಲ್ಕು ಭಯಗಳ ನಡುವೆ ತಿಕ್ಕಲು ತಿಕ್ಕಲಾಗಿ ಕಾಯಿ ಒಡೆಯುವುದರಿಂದಾಗಿ ಏಟುಗಳ ಸಂಖ್ಯೆ 10ಕ್ಕೇರುತ್ತದೆ! ಹೋಳಾದ ಕಾಯಿಯ 2 ತುಂಡುಗಳೆನ್ನ ನಮ್ಮ ಭಾಷೆಯಲ್ಲಿ ಕಡಿಗಳೆನ್ನುತ್ತೇವೆ. ಆದರೆ ನನ್ನಿಂದ ಎಳನೀರು ಚೆಲ್ಲಿಹೋಗುವುದು ತೀರಾ ಕಡಮೆ. ಎಳನೀರು ಒಂದು ಲೋಟದಲ್ಲಿ ಶೇಖರಿಸಿ ಮನೆಯಲ್ಲಿರುವ ಸಣ್ಣಮಕ್ಕಳಿಗೆ ಕೊಟ್ಟರೆ ಅವರು ತುಂಬಾ ಪ್ರಸನ್ನರಾಗುತ್ತಾರೆ.

ಕಾಯಿ ಕೆರೆಯೋದು ನನಗೆ ತುಂಬಾ ಇಷ್ಟದ ಕೆಲಸ. ಚಿಕ್ಕಂದಿನಿಂದಲೇ ಅಮ್ಮ ಅಥವಾ ಅಡುಗೆಯವರು ವೇಗವಾಗಿ, ಆದರೆ ಅಷ್ಟೇ ನಾಜೂಕಾಗಿ ಕಾಯಿ ತುರಿಯುವ ಆ ಕಲೆಯ ಪರಿಯನ್ನು ಕಣ್ಣು ಬಾಯಿ ಬಿಟ್ಟು, ಬೆಕ್ಕಸಬೆರಗಾಗಿ ನೋಡುತ್ತಿದ್ದೆ. ಪೂರ್ತಿ ಕೆರೆದಾದ ಮೇಲೆ ಕಾಯಿಯ ಗೆರಟೆಯ ಒಳಭಾಗ shave ಮಾಡಿದಷ್ಟು neat ಆಗಿಸುವುದು ಸಂಪೂರ್ಣ ಕೈಚಳಕವೇ ಸರಿ. ಪಕ್ಕದಮನೆ ಮಯ್ಯರ ಮಗ, ಅಡುಗೆ ಪುಟ್ಟಣ್ಣನ ಅಮೂಲ್ಯ ಸಲಹೆಗಳನ್ನ ನಿಮಗೆ ತಿಳಿಸಲು ಬಯಸುತ್ತೇನೆ, ಮೊದಲು ಕಡಿಯ ಬದಿಭಾಗಗಳನ್ನ ಕೆರೆದು, ಆನಂತರ ಕ್ರಮೇಣ ಒಳಗಡೆ ಕೆರೆಯುತ್ತಾ ಮುಂದುವರೆಯಬೇಕು. ಒಂಥರಾ Tap ONಮಾಡಿಟ್ಟ Drum ಒಳಗಿನಿಂದ ನೀರು ಕ್ರಮೇಣ ಖಾಲಿಯಾದಂತೆ, ಕಾಯಿಯೊಳಗಿನ ಬೊಂಡು ಕೆರೆಯುತ್ತಾ, ಕೆರೆಯುತ್ತಾ uniform ಆಗಿ ಗೆರಟೆಯ ತನಕವೂ, ಬದಿಭಾಗದಿಂದ ಕ್ರಮೇಣ ಒಳಭಾಗದ ಕಡೆಗೂ ಖಾಲಿಯಾಗುತ್ತಾ ಸಾಗಬೇಕು. ಕೆರೆದ ಕಾಯತುರಿಗಳೆಲ್ಲಾ ಸುರಕ್ಷಿತವಾಗಿ ತಟ್ಟೆಯಲ್ಲಿ ರಾಶಿಬೀಳುತ್ತಿರಬೇಕು, ಹಾಗೆ ರಾಶಿ ಬೀಳೋದನ್ನ ನೋಡುವುದು ಬಲು ಸೊಗಸು.

ಒಂದು ಸಾಂಬಾರಿಗೆ ಎಷ್ಟು ಕಡಿ ಕಾಯಿ ಹಾಕಬಹುದೆನ್ನುವ ಅರಿವು ನನಗಿರಲಿಲ್ಲ. ಅಕ್ಕನಲ್ಲಿ, ಒಂದು ಕಡಿ ಪೂರ್ತಿ ಹಾಕುತ್ತೇನೆ, ಆಮೇಲೆ ನಿನ್ನೆಯದ್ದು ಉಳಿದ ಕಡಿಯಲ್ಲಿ ಸುಮಾರು ಅರ್ಧದಷ್ಟು ಬಾಕಿ ಇದೆ, ಅದನ್ನೂ ಕೆರೆದು ಹಾಕ್ಲಾ?” ಎಂದು ಕೇಳಿದೆ. ಅಕ್ಕ ತಿರುಗಿ ಕೂಡಾ ನೋಡದೆ ಹೂಂ ಅಂದಳು. ಜೈ!” ಎಂದು ಅಷ್ಟೂ ಕಾಯಿಯನ್ನ ಕೆರೆದು ಹಾಕಿದೆ. ಕೆರೆಮಣೆಯ ಬಾಯಿಯ ಮೇಲ್ಮೈ ಮತ್ತದರ ಕೆಳಭಾಗದಲ್ಲಿ ಹಿಡಿದುಕೊಂಡಿರುವ ಕಾಯಿತುರಿಗಳನ್ನ ಒರೆಸಿ ತಟ್ಟೆಗೆ ಹಾಕಿದೆ. ತುರಿಮಣೆಯ ಬಾಯಿಯನ್ನ ಸ್ವಚ್ಛಗೊಳಿಸಿ ತೊಳೆದಿಟ್ಟೆ. ಒಂದು ಕಿವಿಮಾತು, ಒಂದು ಸಾಂಬಾರಿಗೆ ಒಂದು ಕಡಿಗಿಂತ ಹೆಚ್ಚು ಕಾಯಿ ಹಾಕೋದು ಸೂಕ್ತವಲ್ಲ.

ಈ ಕೆಲಸದ ಮಧ್ಯೆ ಎಚ್ಚರದಿಂದ ಒಂದು ಕಿವಿ Gas Stove ಕಡೆಗೆ ಜಾಗೃತವಾಗಿರುವುದು ಮುಖ್ಯ. ಮೊದಲನೆಯ ಸಿಳ್ಳೆ ಹೊಡೆದುಕೊಂಡ ತಕ್ಷಣ ಎದ್ದು ಹೋಗಿ ನೋಡಿದೆ, ಅನ್ನದ CookerWeightನ ಬದಿಗಳಲ್ಲಿ ನೀರಿನ ಪಸೆಯಿರುವುದನ್ನ ಖಚಿತಪಡಿಸಿಕೊಂಡು ಇನ್ನೆರಡು ಸಿಳ್ಳೆಗಳಿಗಾಗಿ ತಾಳ್ಮೆಯಿಂದ ಕಾದು ಆ Stoveನ್ನ OFF ಮಾಡಿದೆ. ಎರಡನೆಯ Cooker ಅರ್ತನಾದವಿಡುವಾಗಲೂ ಕೂಡಾ ಅದೇ ಥರ ಮಾಡಿದೆ.

ಕಾಯಿತುರಿಯನ್ನ ತಟ್ಟೆಯಿಂದ ತೆಗೆದು medium ಗಾತ್ರದ Wet Grinding Jarನಲ್ಲಿ ಹಾಕಿಟ್ಟೆ. ಉರಿಯುತ್ತಿರುವ ಸಣ್ಣ Stoveನ ಮೇಲೆ ಒಗ್ಗರಣೆ ಹಾಕುವ ಸೌಟನ್ನಿಟ್ಟೆ. ಸೌಟಲ್ಲಿದ್ದ ನೀರ ಪಸೆ ಪೂರ್ತಿ ಆರಿದ ಮೇಲೆ ಒಂದು ಚಮಚ ಸೂರ್ಯಕಾಂತಿ ಬೀಜದೆಣ್ಣೆ ಹಾಕಿ, ಅದರ ಮೇಲೆ ಅರ್ಧ ಚಮಚ ಜೀರಿಗೆ, ಅದು ಬಸಿಯಾಗಿ ಸಿಡಿಯಲು ಶುರುವಾದ ತಕ್ಷಣ ಒಂದೂವರೆ ಚಮಚ ಕೊತ್ತಂಬರಿ, ಅದೂ ಕೂಡಾ ಬಿಸಿಯಾಗಿದ್ದು ಮೂಗಿನ ಅರಿವಿಗೆ ಬಂದ ಕ್ಷಣದಲ್ಲೇ ಮೂರು ಮೆಣಸು ಹಾಕಿ, ಮೆಣಸು ಕಪ್ಪಾಗುವುದಕ್ಕೆ ಮುನ್ನ ಬೆಂಕಿ ಆರಿಸಿದೆ. ಸೌಟಲ್ಲಿರುವ ಕೊತಕೊತನೆ ಕುದಿಯುತ್ತಿರೋ ಎಣ್ಣೆಯ ದ್ರಾವಣವನ್ನ Jarನಲ್ಲಿ ಎರೆದಾಗ ಯಾಕೋ ಒಂಥರಾ ರೋಮಾಂಚಿತನಾದೆ! ಹಾಂ! ನನ್ನ ಒಂದು ಅನುಭವದ ಮಾತು; ಮೈಮರೆತರೆ ಎಣ್ಣೆ ಅಥವಾ ಸೌಟಿನ ಲೋಹಭಾಗ ಕೈಗೆ ಸೋಕಿದರೆ ಅದರ ಬಿಸಿ ಮೈಗೆ ತಾಕೀತು ಜೋಕೆ!”. ಒಂದು ಚಿಕ್ಕ ಲೋಟದ ತುಂಬ ನೀರು ತೆಗೆದು Jarನಲ್ಲಿ ಸುರಿದೆ. Jarನ್ನು ಜಾಗ್ರತೆಯಾಗಿ Mixyಯ ಮೇಲ್ಭಾಗದಲ್ಲಿ fit ಮಾಡಿ, Jarನ್ನು ಅದರದ್ದೇ ಆದ ಮುಚ್ಚಳದಿಂದ ಮುಚ್ಚಿಬಿಟ್ಟು, Mixy ON ಮಾಡಿ, Jarನ ಮುಚ್ಚಳ ಬಿಗಿಯಾಗಿ ಹಿಡಿದುಕೊಂಡು Mixy Run ಮಾಡಿದೆ. ಕರ್ಕಶ ಶಬ್ದವನ್ನು ಸುಮಾರು ಒಂದು ನಿಮಿಷ ಸಹಿಸಿಕೊಂಡರೆ ಮಾತ್ರ ಕಾಯಿತುರಿ ಸಮರ್ಪಕವಾಗಿ ರುಬ್ಬಲ್ಪಡುತ್ತದೆ. Jarನ್ನು ತೆಗೆದು ಒಮ್ಮೆ ನೋಡಿ, ಒಂದು ವೇಳೆ ಅದು ಸರಿಯಾಗಿ ರುಬ್ಬಿಕೊಂಡಿಲ್ಲವಾದ್ದರಿಂದಾಗಿ ಕೈಯಿಂದ Jarನೊಳಗಿನ ಮಿಶ್ರಣವನ್ನ ಒಮ್ಮೆ ಕಲಸಿ, ಪುನಃ ಇನ್ನೊಮ್ಮೆ Mixy Run ಮಾಡಬೇಕಾಗಿಬಂತು. ರುಬ್ಬುವ ಘನಕಾರ್ಯ ಮುಗಿಯಿತು, ಅಂದರೆ ಮೂರನೆಯ ಹಂತ ಮಗಿಸಿದೆ. ಇನ್ನು ತರಕಾರಿಯಿರುವ Cookerನ ಹಿಡಿ ಸಡಿಲಗೊಳ್ಳುವ ತನಕ ಒಂದು ಸಣ್ಣ Commercial Break J. ಆಗ ಬಂತು ಸಾಂಬಾರು ತಯಾರಿಸುವ ಅಂತಿಮ ಹಂತದ ಆ ನಿರ್ಣಾಯಕ ಕ್ಷಣಗಳು, ಎದೆ ಢವಗುಟ್ಟುತ್ತಿತ್ತು!

Cookerನ ಹಿಡಿ ಸಡಿಲಗೊಂಡರೆ ಅದರರರ್ಥ, Cooker ತನ್ನ ಕೆಲಸ ಮುಗಿಸಿದೆ ಅಂತ. Weight ಕಿತ್ತು, Cookerನ ಮುಚ್ಚಳ ತೆಗೆದು, Jarನಲ್ಲಿರೋ ದ್ರಾವಣವನ್ನ Cookerಗೆ ಪೂರ್ತಿ ಸುರಿದೆ. ನೀರಿಗೆ ತತ್ವಾರಯಿರುವವರು ಏನು ಹೇಳ್ತಾರೆ ಅಂದ್ರೆ, “Jarನ್ನು ಕುಡಿಯೋ ನೀರಲ್ಲಿ ತೊಳೆಯಬೇಕು, ತೊಳೆದ ನೀರನ್ನು Cookerಗೆ ಅಂದರೆ ನಿಮ್ಮ ಸಾಂಬಾರಿಗೆ ಸುರಿಯಬೇಕು. ಅರ್ಧ ಚಮಚ ಅರಸಿನಪುಡಿ, ಒಂದು ಚಮಚ ಉಪ್ಪು, ಸಾಂಬಾರು ಜಾಸ್ತಿ ಬೇಕಾಗಿರೋದ್ರಿಂದ ಒಂದು ಲೋಟ ನೀರು ಕೂಡಾ ಸುರಿದೆ. Stove ON ಮಾಡಿ ಹಾಗೆಯೇ 5 ನಿಮಿಷ ಅದನ್ನ ಬೇಯಲು ಬಿಟ್ಟೆ. ಇನ್ನೊಂದು Stoveನಲ್ಲಿ ಒಗ್ಗರಣೆ ಸೌಟನ್ನಿಟ್ಟು ಅದರಲ್ಲಿ ಒಂದು ಚಮಚ ಸೂರ್ಯಕಾಂತಿ ಬೀಜದ ಎಣ್ಣೆ ಹಾಕಿ, ಅದು ಸ್ವಲ್ಪ ಬಿಸಿಯಾಗುವಷ್ಟರಲ್ಲಿ ಅದಕ್ಕೆ ಅರ್ಧ ಚಮಚ ಸಾಸಿವೆ ಕಾಳು ಹಾಕಿ, ಸಾಸಿವೆ ಸಿಡಿಯಲು ಶುರುವಾಗುವ ಮುನ್ನ ಅರ್ಧ ಚಮಚ ಜೀರಿಗೆ ಮತ್ತು ಮನಬಂದಷ್ಟು ಕರಿಬೇವಿನ ಸೊಪ್ಪು ಹಾಕಿ, ಸೌಟಲ್ಲಿರುವ ದ್ರಾವಣ ಸಿಡಿಯಲು ಶುರುವಾದಾಗ ಇನ್ನೊಂದು ಕೈಯಿಂದ Stoveನ್ನ OFF ಮಾಡಿ, ಪಕ್ಕದ Stoveನಲ್ಲಿದ್ದ ದ್ರಾವಣ ಸಂಪೂರ್ಣ ಕುದಿದ ನಂತರ, ಆ Cookerಗೆ ಈ ತೈಲ ದ್ರಾವಣವನ್ನು ಸುರಿದಾಗ ಉಂಟಾದ ಕುದಿಯುತ್ತಿರುವ ದ್ರಾವಣಗಳೆರಡರ ಹೊಸ ಮಿಶ್ರಣವೇ ನನ್ನ ಚೊಚ್ಚಲ ಸಾಂಬಾರಾಗಿತ್ತು! ಉಪ್ಪು ಸಾಕಾದಷ್ಟು ಹಾಕಿದೆಯೋ ಇಲ್ಲವೋ ಅನ್ನೋದನ್ನ ಪರೀಕ್ಷಿಸಲು style ಆಗಿ ಒಂದು ಸೌಟಿನಿಂದ ಒಂದೆರಡು ಹನಿ ಸಾಂಬಾರನ್ನ ಅಂಗೈಗೆ ಹಾಕಿ, ರುಚಿ ನೋಡಿದೆ. ಸಾಂಬಾರಿನೆಡೆಗೆ ಹೀಗೂ ಉಂಟೇ ಎಂದು ನಿರ್ಲಿಪ್ತ ನೋಟ ಬೀರಿದೆ. ಸಮಯ ಮಧ್ಯಾಹ್ನ 2 ಗಂಟೆ ಆಗಿತ್ತು.

ಊಟ ಮಾಡಿದೆ. ಸಾಂಬಾರು ತಿನ್ನುವ ಹಾಗಿತ್ತು, ತಿಂದೆ. ರುಚಿ ಗಮನಿಸಲು ಸಾಧ್ಯವಿಲ್ಲದಷ್ಟು ಕೆಟ್ಟ ಹಸಿವು ಕಾಡುತ್ತಿತ್ತು. ಅಕ್ಕ ಸಾಂಬಾರು ಪರ್ವಾಗಿಲ್ವೋ ಅಂದಳು. ಸಂಜೆ Dietingನಲ್ಲಿದ್ದ ವಿಮಲಾಕ್ಷಿ ಬರುತ್ತಿದ್ದಂತೇ ಅಬ್ಬಾ, ಹಸಿವೂ ಅಂದವರೇ ಅಡುಗೆಮನೆಯಿಂದ ಒಂದು ಬಟ್ಟಲಲ್ಲಿ ಸ್ವಲ್ಪ ಅನ್ನ ಸಾಂಬಾರು ಹಾಕಿಕೊಂಡು ಬಂದು ಊಟಮಾಡತೊಡಗಿದರು. ಸಾಂಬಾರಿನ ಜೊತೆ ಮೊದಲ ತುತ್ತು ಬಾಯಿಗಿಡುವಾಗ ಅವರ ಮೊದಲ ಪ್ರತಿಕ್ರಿಯೆಯೇನಿರಬಹುದೆಂದು ಕುತೂಹಲದಿಂದ ಕಾದೆ. ಏನೂ ವ್ಯತ್ಯಾಸವಿಲ್ಲದೆ ಮಾಮೂಲಾಗಿ ಊಟ ಮಾಡುತ್ತಿದ್ದದ್ದು ನೋಡಿ ಬೇಸರವಾದಾಗ ಕೇಳಿದೆ, ಸಾಂಬಾರು ಹೇಗಿದೆ?”. ರುಚಿಯ ಬಗ್ಗೆ ಮುಖದಲ್ಲಿ ಸ್ವಲ್ಪ ಸಂಶಯ ವ್ಯಕ್ತಪಡಿಸುತ್ತಾ, ಸರಿಯಾಗಿಯೇ ಇದೆಯಲ್ಲಾ, ಯಾಕೆ?” ಎಂದರು. ಅದು ಅಂತಿಂಥ ಸಾಂಬಾರಲ್ಲ, ಪ್ರಸಾದನ ಜೀವಮಾನದ ಮೊದಲನೆಯ ಸಾಂಬಾರು. ಹೌದಾ..!?” ಅಂದವರೇ ತಕ್ಷಣ ಇನ್ನೂಂದು ತುತ್ತು ಅನ್ನ ತಿಂದು ನಿಜವಾಗ್ಲೂ ತುಂಬ ಚೆನ್ನಾಗಿದೆ, ಹೇಗೆ ಮಾಡಿದ್ರಿ?” ಅನ್ನೋವಾಗ ಹಿಹ್ಹಿಹ್ಹೀ ಎಂದು ಪೆಚ್ಚಾಗಿ ಹಲ್ಕಿರಿದೆ, ಒಳಗೊಳಗಿನಿಂದಲೇ ಅನ್ಕೊಂಡೆ, ಇವರು ನನ್ನ ಮೊದಲನೆ ಸಾಂಬಾರಿನ ಸಂಭ್ರಮಕ್ಕೆ ನೀರೆರೆಯಬಾರದೆನ್ನುವ ಕಾರಣದಿಂದ, (ಕಾಯಿ ಹಾಕಿದ್ದು ಜಾಸ್ತಿಯಾಗಿದ್ದರೂ) ನಿಜವಾಗ್ಲೂ ತುಂಬ ಚೆನ್ನಾಗಿರುವ ಸುಳ್ಳು ಹೇಳ್ತಿದ್ದಾರೆ.

ರಸಾಯನಶಾಸ್ತ್ರದ ಪ್ರಯೋಗದ ಥರಹ ಕಲ್ಪಿಸಿಕೊಂಡು ಕಲಿಯಲು ಶುರುಮಾಡಿದ ನಾನು ಪಾಕಶಾಸ್ತ್ರದಲ್ಲಿ, ಅಂದಿನಿಂದ ಇಂದಿನವರೆಗೂ ಬೆಚ್ಚಿಬೀಳಿಸುವಂಥಹ ಅದ್ವಿತೀಯ ಪ್ರಯೋಗಗಳನ್ನ ಮಾಡುತ್ತಲೇ ಇದ್ದೇನೆ. ಖಾರ ಜಾಸ್ತಿಯಾದರೆ ಸಾಂಬಾರಿಗೆ ಸಕ್ಕರೆ ಹಾಕಿ ವಿಮಲಾಕ್ಷಿಯಿಂದ ಶ್ಲಾಘಿಸಲ್ಪಟ್ಟ ಉದಾಹರಣೆಯೊಂದೇ ಸಾಕು ನನ್ನ ಈ ತೀವ್ರತರ ಪ್ರಯೋಗಗಳ ಬಗ್ಗೆ ನಿಮಗೆ ಅರಿವು ಮೂಡಲು. ಪ್ರಸಕ್ತ ನಾನು ಪಾಕಕ್ರಾಂತಿಯೆಬ್ಬಿಸುವ ಒಂದು ಹೊಸ ಆಲೋಚನೆಯಲ್ಲಿದ್ದೇನೆ. ಅದೇನೆಂದರೆ, ನಮ್ಮ ದೂರದ ಸಂಬಂಧಿ, ಸೊಂದಿ ವನಿತಕ್ಕನ ಅಡುಗೆ Blog ಓದಿ, ಅಡುಗೆ ಮಾಡಿ ಕಲಿಅಂತ ದೊಡ್ಡಕ್ಕ ಹೇಳಿದ್ಳು. ಒಂದು ವೇಳೆ ಈ Blog ತುಂಬಾ ಜನಮನ್ನಣೆಗೆ ಪಾತ್ರವಾದರೆ, ಸೊಂದಿ ವನಿತಕ್ಕನ Blogಗೆ ಪೈಪೋಟಿಯಲ್ಲಿ ನನ್ನ ಪುಟ್ಟ(ಆಧುನಿಕ ನಳ?)ನ ಪಾಕ-ಪ್ರಸಂಗಗಳು ಎಂಬ ಹೊಸ Blog ಶುರು ಮಾಡಬೇಕೆಂದಿದ್ದೇನೆ. ಮುಂದೊಂದು ದಿನ ಜನ ಮುಗಿಬಿದ್ದು ಪುಟ್ಟನ ಈ Blogಗಳನ್ನ ಓದುತ್ತಿರುವಾಗ, ನನ್ನ ದೊಡ್ಡಕ್ಕ ಸೊಂದಿ ವನಿತಕ್ಕನಲ್ಲಿ ನೋಡೇ, ನನ್ನ ತಮ್ಮನ Blog ನೋಡಿ ಅಡುಗೆ ಕಲಿ ಎನ್ನುವಂಥ ದಿನವೊಂದೇ ನನ್ನ ಪುಟ್ಟ ಕನಸು.

ಕೊನೆಯದಾಗಿ ಪಾಕ ಪ್ರವೀಣೆ ಸೊಂದಿ ವನಿತಕ್ಕ, Dieting ವಿಮಲಾಕ್ಷಿ, Blogಗಳಲ್ಲಿ ಧ್ಯಾನಮಗ್ನಳಾಗಿರುವ ದೊಡ್ಡಕ್ಕ, CBI ವಿಜೆಯಿ ಅಥವಾ ಈ Blogನಲ್ಲಿ ಪ್ರಸ್ತಾಪಗೊಂಡಂಥಾ ಇನ್ನಾವುದೇ ವ್ಯಕ್ತಿಯಿರಲಿ, ನಿಮ್ಮೆಲ್ಲರಲ್ಲೂ ನನ್ನದೊಂದು ಸವಿನಯ ಬಿನ್ನಹ; Blogನಲ್ಲಿ ಉಲ್ಲೇಖಗೊಂಡಿರುವ ಯಾವುದೇ ವಿಚಾರಗಳು ನಿಮ್ಮ ಮನ ನೋಯಿಸುವ ಉದ್ದೇಶದಿಂದ ಬರೆದಿದ್ದಲ್ಲ. ಅನುಮತಿಯಿಲ್ಲದೆ ನಿಮ್ಮ ಹೆಸರನ್ನ ನನ್ನ Blogನಲ್ಲಿ ಬಳಸಿದ್ದರಿಂದ ನೋವಾಗಿದ್ದರೆ ನನಗೆ ಕ್ಷಮೆಯಿರಲಿ

ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ |

ನಿನ್ನ ದುಡಿತದ ಬೆವರೊ, ಪರರ ಕಣ್ಣೀರೋ? ||

ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ |

ಜೀರ್ಣಿಸದ ಋಣಶೇಷ - ಮಂಕುತಿಮ್ಮ ||

ಭಾವಾರ್ಥ: ಉಣ್ಣುವಾಗ ಒಂದು ಪ್ರಶ್ನೆ ಹಾಕಿಕೊ. ಅನ್ನ ಬೇಯಿಸಿದ ನೀರು ನಿನ್ನ ದುಡಿತದ ಬೆವರಾಗಿದೆಯೋ ಇಲ್ಲಾ ಅನ್ಯರ ಕಣ್ಣೀರೋ? ಜಗಕೆ ಉಣ್ಣಲು ನೀಡಿದಷ್ಟು ನೀನು ಉಣ್ಣು, ಉಳಿದದ್ದು ಜೀರ್ಣವಾಗದ ಋಣಶೇಷ ಅಷ್ಟೆ.

ಮೊದಲ ಮಾತು

ಕನ್ನಡವೆನೆ ಕುಣಿದಾಡುವುದೆನ್ನೆದೆ,

ಕನ್ನಡವೆನೆ ಕಿವಿ ನಿಮಿರುವುದು..

- ಎಲ್ಲೋ ಕೇಳಿದ ನೆನಪು..

ಓದುಗ-ಬಂಧುಮಿತ್ರರೆಲ್ಲರ ಬಹುನಿರೀಕ್ಷೆಯ ಪುಟ್ಟನ ಹರಟೆ Blog ಇವಾಗಲಷ್ಟೇ ಮೊಟ್ಟೆಯೊಡೆದು Netನಲ್ಲೀಗ ನಿಮ್ಮ ಮುಂದಿದೆ. ಸಹನೆಯಿಂದ ಕುಳಿತು ಓದಿ, ಒಂದಿಷ್ಟು Comments ಹೊಡೆಯುವ ಮನಸ್ಸು ಮಾಡುವ ಉದಾರಿಗಳಿಗೆ ನಾನು ಸದಾ ಅಭಾರಿ. ನಿಮ್ಮ Commentಗಳು ಟೀಕೆಯಾಗಿದ್ದರೂ ಸರಿ, ಅಥವಾ ಮೆಚ್ಚುಗೆಯಾಗಿದ್ದರೂ ಸರಿ, ಅವು ನನ್ನ ಬರವಣಿಗೆಯ ಪ್ರಗತಿಶೀಲ ಬೆಳವಣಿಗೆಗೆ inputs ಎಂದು ಭಾವಿಸುತ್ತೇನೆ. ನನ್ನ ಕೆಲವು Blogಗಳು ತೀರಾ ಚಿಕ್ಕದಾಗಿರಬಹುದು, ಕೆಲವು ತೀರಾ ಉದ್ದವಾಗಿರಬಹುದು. ಆದರೆ ತಿಳಿಸಲು ಬಯಸಿದ ವಿಚಾರಗಳ ಪರಿಪೂರ್ಣತೆ ಹಾಗೂ ಸನ್ನಿವೇಶಗಳ ಸ್ಪಷ್ಟ ಚಿತ್ರಣವನ್ನು ಓದುಗರಿಗೆ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿರುತ್ತೇನೆ. ಇದು ನನ್ನ Blogನ ಗಾತ್ರದ ಮೇಲೆ ಗಣನೀಯ ಪ್ರಭಾವ ಬೀರಬಹುದು. Blog ಎಷ್ಟೇ ಉದ್ದವಿರಲಿ, ಆಸಕ್ತರು ತಾಳ್ಮೆಯಿಂದ ಕುಳಿತು ಓದಿಯೇ ಓದುವರು, Blogನ ಗಾತ್ರದ ಬಗ್ಗೆ ಎಂದಿಗೂ ತಲೆಕೆಡಿಸಲಾರೆ ಎನ್ನುವುದೇ ನನ್ನ ನಿರ್ಧಾರ.

ಸಂಪೂರ್ಣ ಅಚ್ಚ ಕನ್ನಡದಲ್ಲೇ ಹರಟೆಹೊಡೆಯಲು ಭಾಷಾಜ್ಞಾನದ ಕೊರತೆ ಕಾಡಿದಾಗಲೆಲ್ಲ ಕನ್ನಡದ ಕರುಳು ಚುರುಕ್ ಎಂದರೂ ನಡು-ನಡುವೆ ಸಮಯ ಸಂದರ್ಭಗಳಿಗೆ ಸರಿಹೊಂದಬಹುದಾದ ಕೆಲವು ಆಂಗ್ಲ ಪದಗಳನ್ನು ಬಳಸಿದ್ದಕ್ಕೆ ವಿಷಾದಿಸುತ್ತೇನೆ. ಕೆಲವೊಮ್ಮೆ ಕೆಲವೊಂದು ಶಬ್ದಗಳನ್ನು ಆರಿಸಿಕೊಳ್ಳುವುದಕ್ಕೆ ಮುನ್ನ ತಲೆಕೆರೆದುಕೊಂಡು, ಎರಡು ಮೂರು Dictionaryಗಳನ್ನ ತಿರುವಿಹಾಕುವ ಪರಿಶ್ರಮಪಟ್ಟಿರುತ್ತೇನೆ, ಬರೆಯುವ ಪದಗಳ ಅರ್ಥಗೌರವಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿರುತ್ತೇನೆ. ಕನ್ನಡದ ‘Script’ನಲ್ಲಿ type ಹೊಡೆಯೋದು ನನಗಿನ್ನೂ ಅಭ್ಯಾಸವಾಗಿಲ್ಲ. So, ನನ್ನಿಂದ Blogಗಳನ್ನ ಆಗಾಗ್ಗೆ ಬರೆಯಲು ಸಾಧ್ಯವಾದೀತೋ ಎಂಬ ಚಿಂತೆಯೂ ನನ್ನನ್ನ ಕಾಡುತ್ತಿದೆ. ಅಪರೂಪಕ್ಕೊಂದು Blog ಕಾಣಸಿಗಬಹುದು.

ಪೂರ್ಣಚಂದ್ರ ತೇಜಸ್ವಿ, ಮೀನಗುಂಡಿ ಸುಬ್ರಮಣ್ಯ, ಬನ್ನಂಜೆ ಗೋವಿಂದಾಚಾರ್ಯ, ಬೀchi, ಡಿವಿಜಿ, ಅನಕೃ, ರಾಜಾ ಚೆಂಡೂರ್, ಯಂಡಮೂರಿ ವೀರೇಂದ್ರನಾಥ್, R K ನಾರಾಯಣನ್, Williams Wordsworth, William Shakespeare, ಸಂತ ಕಬೀರದಾಸ್, ಪ್ರದೀಪ್ ಕೆಂಜಿಗೆ, ಅನಂತ ಚಿನಿವಾರ್, ರವಿ ಬೆಳಗೆರೆ, ಗುಲ್ಜಾರ್, ಇವರುಗಳೆಲ್ಲರ ಕೃತಿಗಳಿಂದ ಬಹಳವೇ ಪ್ರಭಾವಿತನಾಗಿದ್ದೇನೆ. ಒಂದುವೇಳೆ ಇವರುಗಳ ಕರಿನೆರಳು ನನ್ನ ಬರಹಗಳ ನಡವೆ ಕಂಡುಬಂದಲ್ಲಿ ಅದನ್ನ ಕೃತಿ ಚೌರ್ಯವೆನ್ನಬೇಡಿ, ನನಗೆ ತಿಳಿಸಿಬಿಡಿ. ಅದು ಅವರುಗಳ ಬರಹಗಳು ನನ್ನ ಮನದಲ್ಲಿ ಮನೆ ಮಾಡಿ ಮೂಡಿಸಿದ ಅಚ್ಚಳಿಯದ ಕುರುಹುಗಳು. ಕೆಲವೊಂದೆಡೆ ಸಾಂದರ್ಭಿಕವಾಗಿ ಸೂಕ್ತವೆನಿಸಬಹುದಾದ, ನನಗಿಷ್ಟವಾದ ಕಗ್ಗ, ಪದ್ಯ-ಗದ್ಯಗಳ ಸಾಲುಗಳನ್ನ ಬದಲಾಯಿಸದೇ ಮೂಲರೂಪದಲ್ಲೇ ಹಾಗೆಯೇ ಬರೆದಿಳಿಸಿರುತ್ತೇನೆ, ಇದು ನನಗೆ ಗೊತ್ತಿದ್ದು ಮಾಡುವ ಕೆಲಸವಾಗಿದ್ದು, ಅದು ಅವರುಗಳ ಮೇಲೆ ನನಗಿರುವ ಗೌರವವನ್ನ ಸೂಚಿಸುತ್ತದೆ.

ಕನ್ನಡ, ಆಂಗ್ಲಭಾಷೆಗಳ ಹೊರತಾಗಿ ಹಿಂದಿ, ಉರ್ದು, ತುಳು, ತೆಲುಗು,ತಮಿಳು, ಮಲಯಾಳಂ ಭಾಷೆಗಳಲ್ಲೂ ನನಗೆ ಆಸಕ್ತಿಯಿದ್ದು, ಅವುಗಳ ಪ್ರಯೋಗ ನನ್ನ Blogನಲ್ಲಿ ಕೆಲವೊಮ್ಮೆ ಕಂಡುಬರಬಹುದು. ನನ್ನ ಭಾಷಾಜ್ಞಾನದ ವ್ಯಾಪ್ತಿಯನ್ನ ವೃದ್ಧಿಸುವ ಚಟವಿರುವುದರಿಂದ, ಹೆಚ್ಚು ಹೆಚ್ಚು ಭಾಷೆಗಳನ್ನ ಕಲಿಯೋ ಸಣ್ಣ ಹುಚ್ಚು ಇದೆ ನನಗೆ.

ಸರಿಸುಮಾರು 1994ನೇ ಇಸವಿ, ಪ್ರಾಸಬದ್ಧವಾದ ಏನೋ ಒಂದು ಹನಿಗವನ ತುಷಾರದಲ್ಲಿ ಓದಿದ್ದು ಕಣ್ಣು ಕುಕ್ಕಿತು. ಜೀವನದಲ್ಲಿ ಒಂದೇ ಒಂದು ಬಾರಿ ಉದ್ದೇಶಪೂರ್ವಕವಾಗಿ ತಿಳಿದು ಮಾಡಿದ ಕೃತಿಚೌರ್ಯದ ಕಥೆಯಿದು, ಆಗ ನನ್ನ ವಯಸ್ಸಿನ್ನೂ 10, 4ನೆಯ ತರಗತಿ. ಸುಶೀಲಾ Teacher ನಮ್ಮಲ್ಲಿ ಏನಾದರೂ ಒಂದು ಸಣ್ಣ ಪದ್ಯವೋ ಅಥವಾ ಲೇಖನವೋ ನಾವೇ ಬರೆದುಕೊಂಡು ಬರಬೇಕೆಂದಿದ್ದರು. ಮರುದಿನ ನನ್ನ ಸರದಿ ಬಂದಾಗ ತುಂಬಾ ಉತ್ಸಾಹದಿಂದ ಓದಲು ಶುರು ಮಾಡಿದೆ, ಸ್ವಲ್ಪ ಹೊತ್ತಿನಲ್ಲೇ ನಗುತ್ತಾ ಸಾಕು ಸಾಕು ನಿಲ್ಲಿಸು, ರಾಮ ರಾಮಾ ವಯಸ್ಸಿಗೆ ಮೀರಿದ ಬರಹಗಳು!” ಎಂದು ಗೊಣಗತೊಡಗಿದರು. ಎದೆ ಝಿಲ್ಲೆಂದಿತು. ಕವನ ಚೆನ್ನಾಗಿಯೇ ಇದೆ, ಆದರೆ ಇದು ನೀನು ಬರ್ದಿದ್ದಲ್ಲಾ.. ನಿಜ ಹೇಳು, ಎಲ್ಲಿ ಸಿಗ್ತು ನಿನಗಿದು?” ಎಂದರು. ಇದು ಇವರಿಗೆ ಹೇಗೆ ಗೊತ್ತಾಯ್ತು ಅಂತ ಚಕಿತನಾದೆ. 6th Senseಯಾಕೋ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಅಪ್ಪ ಹೇಳಿಕೊಟ್ಟರು...” ಎಂದು ಸುಳ್ಳು ಹೇಳಿದೆ. ಯಾವ ತಂದೆತಾಯಿಯೂ, ತನ್ನ ಮಕ್ಕಳಿಗೆ ಇಂಥಾ ಪದ್ಯ ಬರೆದುಕೊಡೋದಿಲ್ಲ. ಇದನ್ನ ಯಾರು ಬರೆದುಕೊಟ್ಟಿದ್ದಾರೋ ಅವರಲ್ಲೇ ಇದರ ಅರ್ಥ ಒಮ್ಮೆ ಕೇಳಿ ನೋಡು. ಸುಳ್ಳು ಹೇಳ್ಬಾರ್ದೂ.. ಅಂದರು. ಮುಖದ ಮೇಲೆ ಹೊಡೆದಂಥ ಅನುಭವವಾಯಿತು. ಮನೆಗೆ ಹೋದ ಮೇಲೆ ಆ ಕವನವನ್ನ ಒಮ್ಮೆ ಕೂಲಂಕಶವಾಗಿ ಗಮನಿಸಿದೆ.

ನನ್ನ ನಲ್ಲೆಯ ಗಲ್ಲ, ರಸಗುಲ್ಲ,

..ಸೊಲ್ಲ

..ಬೆಲ್ಲ..

-ಹೀಗೆ ಏನೇನೋ ಬರೆದಿತ್ತು.

ಗಲ್ಲ ಅಂದರೆ ಕೆನ್ನೆ ಎನ್ನುವುದನ್ನ ಸಣ್ಣಕ್ಕ ವಿಜೆಯಿಯ ಹತ್ತಿರ ಕೇಳಿ ದೃಢಪಡಿಸಿಕೊಂಡೆ. ಆದರೆ ಇನ್ನೂ ನಲ್ಲೆ ಎನ್ನುವ ಪದ ಏನೇನೂ ಅರ್ಥವಾಗಿರಲಿಲ್ಲ. ಸಂಶಯ ಬರದಿರಲಿ ಎಂದು 10-15 ನಿಮಿಷ ಕಳೆದಮೇಲೆ ಹೋಗಿ ಅಕ್ಕನ ಹತ್ತಿರ ಕೇಳಿದೆ, ನಲ್ಲೆ ಅಂದರೆ ಏನು?”. CBI ವಿಜೆಯಿಯ ಬುದ್ಧಿ ಚುರುಕಾಯ್ತು, ತನಿಖೆ ಶುರುವಾಯಿತು! ಬಾಯಿಬಿಡಿಸಿ, ಪೂರ್ತಿ ವಿಚಾರಣೆ ಮುಗಿದಮೇಲೆ ಹೊಟ್ಟೆಹುಣ್ಣಾಗುವಂತೆ ನಕ್ಕು ನಲ್ಲೆಯೆನ್ನುವ ಪದದ ಅರ್ಥ ಹೇಳಿದಳು. ನನಗೇನು ಮಾಡಲಿ ಅಂತ ದಿಕ್ಕೇ ತೋಚಲಿಲ್ಲ, ನಗುವುದೋ, ಅಳುವುದೋ ನೀವೇ ಹೇಳಿ.

ಹೀಗೆ, ಗಿರೀಶಣ್ಣ ಇತ್ತೀಚೆಗೆ ಶುರುಮಾಡಿದ ಶೃಂಗಾರ ಕಾವ್ಯಗಳನ್ನ ಬರೆಯುವ ಸಾಧನೆ ನಾನು ಬಹಳ ಚಿಕ್ಕಂದಿನಲ್ಲೇ ಮಾಡಿದ್ದೇನೆ. ಅನ್ಯಾಯವಾಗಿ ತೀರಾ ಚಿಕ್ಕಂದಿನಲ್ಲೇ ಆದ ಇಂಥಾ ಒಂದು ಮುಖಭಂಗ ನನ್ನಲ್ಲಿ ಕೃತಿಚೌರ್ಯದ ಆಲೋಚನೆಗಳನ್ನ ಶಾಶ್ವತವಾಗಿ ಸಮಾಧಿ ಮಾಡಿದೆ.

ಅಂದಹಾಗೆ, ಇದು ನನ್ನ ಎರಡನೆಯ Official Blog ಆಗಿರುತ್ತಿತ್ತು. ಆದರೆ ಕಷ್ಟಪಟ್ಟು type ಮಾಡಿದ ಆ ನನ್ನ ಮೊದಲನೆಯ Blog ಬಿತ್ತರಗೊಳ್ಳುವುದಕ್ಕೂ ಮುನ್ನ ಅನ್ಯಾಯವಾಗಿ ಕೆಲವು ವಿವಾದಗಳಿಗೆ ಬಲಿಯಾಯಿತು. So, ಎಂದೆಂದಿಗೂ ಇಂಥ ಘೋರಗಳಿಂದ ನನ್ನ Blog ಆದಷ್ಟು ದೂರವಿರಲಿ ಎಂದು ಬಯಸುತ್ತೇನೆ. ನನಗೆ ಕನ್ನಡದಲ್ಲಿ type ಹೊಡೆಯುವ ಕಲೆ ಬಹಳ ಬೇಗ ಸಿಧ್ಧಿಸಲಿ ದೇವರೇ ಎಂದು ತಾಯಿ ಶ್ರೀದೇವಿಯನ್ನ ಬೇಡುತ್ತಾ, ಮೊದಲ Blogಗೆ ಮಂಗಳ ಹಾಡುತ್ತಿದ್ದೇನೆ.

ಕೈಗೆ ಸಿಕ್ಕಿದ ಡಿವಿಜಿಯವರ ಕಗ್ಗವೊಂದರಿಂದ Blog ಮುಗಿಸುತ್ತಿದ್ದೇನೆ;

ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ |

ಅವನರಿವಿಗೆಟುವೊಲೊಂದಾತ್ಮ ನಯವ ||

ಹವಣಿಸಿದನಿದನು ಪಾಮರಜನದ ಮಾತಿನಲಿ |

ಕವನ ನೆನಪಿಗೆ ಸುಲಭ ಮಂಕುತಿಮ್ಮ ||

ಭಾವಾರ್ಥ: ನಾನು ಕವಿಯಲ್ಲ, ವಜ್ಞಾನಿಯಲ್ಲ, ಬರಿ ಅಲೆಮಾರಿ. ಅರಿವಿಗೆ ಎಟುಕಿದ್ದನ್ನು ಅನುಭವಿಸಿ, ಆನಂದಿಸಿದವನು. ಇಲ್ಲಿ ದರ್ಶನ ಮಾಡಿಸಿದ್ದೇನೆ. ಪಾಮರರ ಅನಿಸಿಕೆಯಂತೆ ಪದ್ಯವು ನೆನಪಿಗೆ ಸುಲಭ.

- ಪ್ರಸಾದ.

|| ಸಿರಿಗನ್ನಡಂ ಗೆಲ್ಗೆ ||